
ಕಲಬುರಗಿ,ಡಿ.24:ವಿಜಯಪುರ ನಗರದಲ್ಲಿ ಕಳೆದ ಡಿಸೆಂಬರ್ 20 ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ನೀಡಿರುವ ಒಟ್ಟು 102 ನೂತನ ನಗರ ಸಾರಿಗೆ ವಾಹನಗಳನ್ನು ಸಾರಿಗೆ ಸಚಿವರು ಲೋಕಾರ್ಪಣೆ ಮಾಡಿದ್ದು, ಇದರ ಪ್ರಯುಕ್ತ ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕರಾದ ಕನೀಜ್ ಫಾತೀಮಾ ಅವರು ಡಿಸೆಂಬರ್ 23 ರಂದು (ಮಂಗಳವಾರ) ರಾಮಮಂದಿರ-ರಾಮಮಂದಿರ ವಾಯಾ ಸೇಡಂ ರಿಂಗ್ ರೋಡ, ಮಹೆಬೂಬ ನಗರ ಮಾರ್ಗದಲ್ಲಿ ಸಂಚರಿಸಲಿರುವ ನಾಲ್ಕು ನಗರ ಸಾರಿಗೆ ನೂತನ ಬಸ್‍ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಈಗಾಗಲೇ ಕಲಬುರಗಿ ನಗರದಲ್ಲಿ ಕಾರ್ಯಾಚರಣೆಯಲ್ಲಿರುವ ನಗರ ಸಾರಿಗೆ ಮಾರ್ಗಗಳಲ್ಲಿ ಹೆಚ್ಚಿನ ಜನ ದಟ್ಟಣೆ ಇರುವ ಮಾರ್ಗಗಳನ್ನು ಗುರುತಿಸಿ ಸದರಿ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರು ಈ ನಗರ ಸಾರಿಗೆ ವಾಹನಗಳ ಸದುಪಯೊಗಪಡೆದುಕೊಳ್ಳಬೇಕೆಂದು ಕಲಬುರಗಿ ಉತ್ತರ ಮತಕ್ಷೇತ್ರ ಶಾಸಕರಾದ ಕನೀಜ್ ಫಾತೀಮಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಜಹರ್ ಆಲಂ ಖಾನ್ ಸೇರಿದಂತೆ ಸ್ಥಳಿಯ ಮಹಾನಗರ ಪಾಲಿಕೆಯ ಸದಸ್ಯರು, ಕಲಬುರಗಿ ವಿಭಾಗ-1, ಘಟಕ ವ್ಯವಸ್ಥಾಪಕರು ಕಲಬುರಗಿ ಘಟಕ-4, ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ವಿಭಾಗೀಯ ತಾಂತ್ರಿಕ ಶಿಲ್ಪಿಗಳು, ಸಾರ್ವಜನಿಕರು ಹಾಗೂ ನಿಗಮದ ಸಿಬ್ಬಂದಿಗಳು ಉಪಸ್ಥಿತರಿದ್ದರು.























