ಕೋಲಾರ,ಆ,೧೧- ಮಾದಕ ದ್ರವ್ಯ,ತಂಬಾಕು ಸೇವನೆಮುಕ್ತ ಅಪರಾಧ ರಹಿತ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸಮಾಜದಲ್ಲಿ ಬದಲಾವಣೆ ತರಲು ಕಾರಣವಾಗಿದೆ ಎಂದು ತಾಲ್ಲೂಕಿನ ಸೂಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸುಮಾ ತಿಳಿಸಿದರು.
ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶುಚಿತ್ವಕ್ಕೆ ಒತ್ತು ನೀಡುವ ಸುಂದರ ಸಮಾಜ ನಿರ್ಮಾಣ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರಿ ಯಾಗಿದ್ದು, ವಿದ್ಯಾರ್ಥಿಗಳ ಮೂಲಕ ಪೋಷಕರಿಗೆ ಸಂದೇಶ ತಲುಪಿಸುವ ಕೆಲಸ ಮಾಡುತ್ತಿರುವುದು ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ ಎಂದರು.
ದೇಶದ ಭವಿಷ್ಯವೇ ಯುವಕರಾಗಿದ್ದೀರಿ, ನೀವು ಮಾದಕ ವಸ್ತುಗಳಿಂದ ದೂರವಿರುವುದು ಸೂಕ್ತ, ಯುವಜನತೆಯ ಮೇಲೆ ದೇಶ ಅಲ್ಲದೆ ಕುಟುಂಬಗಳೂ ಸಹ ಅವಲಂಭಿತವಾಗಿರುತ್ತವೆ. ಆದರೆ, ಅದನ್ನು ಮರೆತು ಯಾವುದೋ ಕಾರಣಗಳಿಗೆ ಯುವಶಕ್ತಿಯು ಮಾದಕ ವಸ್ತುಗಳಿಗೆ ತಮ್ಮನ್ನು ಅರ್ಪಿಸಿಕೊಳ್ಳುವ್ಯದರಿಂದ ನಿಮ್ಮ ಕುಟುಂಬ ಅಲ್ಲದೆ ದೇಶದ ಮೇಲೆಯೂ ಆತಂಕಕಾರಿ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಗೋವಿಂದ್ ಮಾತನಾಡಿ, ಗುರು ಹಿರಿಯರಿಗೆ ಗೌರವ ಕೊಡಬೇಕು. ದುಶ್ಚಟಗಳಿಂದ ದೂರವಿರಬೇಕು. ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿಯಬೇಕು ಎಂದರು.
ಸ್ವಾಸ್ಥ್ಯ ಶುಚಿತ್ವ ಎಂದರೆ ದೈಹಿಕವಾಗಿ ಮಾತ್ರವಲ್ಲ. ಮಾನಸಿಕವಾಗಿ ಕೂಡ ಹೌದು. ನಮ್ಮ ಮಾನಸಿಕ ಯೋಚನೆ. ಭಾವನೆ ಆಲೋಚನೆಗಳು ಸನ್ಮಾರ್ಗದಲ್ಲಿ ನಡೆಯಬೇಕು. ನಾವು ದಿನನಿತ್ಯ ಬಳಸುವಂತಹ ಅನೇಕ ರಾಸಾಯನಿಕ ವಸ್ತುಗಳಿಂದ ನಮ್ಮ ಆರೋಗ್ಯದ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.
ವಲಯದ ಮೇಲ್ವಿಚಾರಕಿ ಉಷಾ ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞೆ ಬೋಧಿಸಿ ಪೂಜ್ಯ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಂತೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸುತ್ತಿದ್ದು, ಇದರಿಂದ ಸಮಾಜಕ್ಕೆ ಒಳಿತಾಗಲಿ ಎಂಬುದೇ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ತಂಬಾಕು,ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿಯ ಜತೆಗೆ ಜಿಲ್ಲೆಯಲ್ಲಿ ಮದ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಅನೇಕರನ್ನು ಮದ್ಯ ಸೇವನೆಯಿಂದ ದೂರ ಮಾಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕರು, ಮಂಜುಳಾ, ಚಂದ್ರಪ್ಪ. ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.



























