
ಹುಬ್ಬಳ್ಳಿ, ಡಿ1: ಪತಂಜಲಿ ರಾಜ್ಯ ಕಾರ್ಯಾಲಯ ಕೇಶ್ವಾಪುರ ಹುಬ್ಬಳ್ಳಿಯಲ್ಲಿ ಸ್ವದೇಶೀ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ, ಪತಂಜಲಿ ಯೋಗಪೀಠದ ಕರ್ನಾಟಕದ ವರಿಷ್ಠ ರಾಜ್ಯ ಪ್ರಭಾರಿಗಳಾದ ಶ್ರೀ ಭವರಲಾಲ್ ಆರ್ಯ ಅವರು, ಪ್ರತಿಯೊಬ್ಬ ನಾಗರಿಕರು ಶುದ್ಧ ಸ್ವದೇಶಿ ಉತ್ಪನ್ನಗಳನ್ನು ಬಳಸುವುದು ಹಾಗೂ ನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯಯುತ ಜೀವನ ನಡೆಸಲು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು “ಆರೋಗ್ಯವಾಗಿರುವುದೇ ನಿಜವಾದ ದೇಶಸೇವೆ. ನಿತ್ಯ ಒಂದು ಗಂಟೆ ಯೋಗಾಭ್ಯಾಸ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು,” ಎಂದು ತಿಳಿಸಿದರು.
“ರಾಜೀವ್ ದೀಕ್ಷಿತ್ ಅವರು ಸ್ವದೇಶಿಯ ಉಳಿವಿಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ಸಂಕಲ್ಪ ಮತ್ತು ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾಗರಿಕರು ಕಡ್ಡಾಯವಾಗಿ ಜಂಕ್ ಫುಡ್‍ಗಳು ಮತ್ತು ಸಾಫ್ಟ್ ಡ್ರಿಂಕ್‍ಗಳಿಂದ ದೂರ ಉಳಿದು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ಸೇವಿಸಬೇಕು,” ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಯೋಗದ ಅಭಿಯಾನವನ್ನು ತೀವ್ರಗೊಳಿಸಿ `ಯೋಗ ಯುಕ್ತ, ರೋಗ ಮುಕ್ತ ಕರ್ನಾಟಕ’ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಪತಂಜಲಿ ಪಶು ಆಹಾರ ವಿಭಾಗದ ದಕ್ಷಿಣ ವಲಯದ ವಲಯ ವ್ಯವಸ್ಥಾಪಕರಾದ ದಿವಾಕರ್ ಮೂರ್ತಿ,ಪತಂಜಲಿ ಸ್ವದೇಶೀ ವಿಭಾಗ ಕರ್ನಾಟಕದ ಮಾರಾಟ ವ್ಯವಸ್ಥಾಪಕರಾದ ಮನೋಜ್ ಕುಮಾರ್ ಸಾಹು ಹಾಗು ಡಾ. ಮಂಜುನಾಥ್ ಅವರು ಉಪಸ್ಥಿತರಿದ್ದರು.

























