
ಬೀದರ: ನ.25:ನ. 30 ರಂದು ಭಾನುವಾರ ಬೆ. 11-30 ಕ್ಕೆ ನಗರದ ಗಣೇಶ ಮೈದಾನದಲ್ಲಿ ಮರಾಠಾ ಸಮುದಾಯದ ಐಕ್ಯತೆಗಾಗಿ, ಸಂಘಟನೆಗಾಗಿ ಮತ್ತು ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಚರ್ಚಿಸಲು ಈ ಸಮಾವೇಶ ಆಯೋಜಿಸಲಾಗಿದೆ. ಸಮಾವೇಶವನ್ನು ಕಾರ್ಮಿಕ ಸಚಿವ ಸಂತೋಷ ಲಾಡ್ ಉದ್ಘಾಟಿಸಲಿದ್ದಾರೆ. ಪಕ್ಷಾತೀತವಾಗಿ ಮರಾಠಾ ಸಮುದಾಯದ ಎಲ್ಲಾ ಬಾಂಧವರು ತಪ್ಪದೇ ಪಾಲ್ಗೊಂಡು ಸಮಾವೇಶ ಯಶಸ್ವಿಗೊಳಿಸಬೇಕೆಂದು ಮಾಜಿ ಜಿ.ಪಂ. ಅಧ್ಯಕ್ಷ ಪದ್ಮಾಕರ ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮರಾಠಾ ಸಮಾಜದ ವತಿಯಿಂದ ಸೋಮವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮರಾಠಾ ಸಮಾಜದ ಸ್ಥಿತಿ ದಯನೀಯವಾಗಿದೆ. ಇದಕ್ಕೆಲ್ಲ ಸಮುದಾಯದ ಅಸಂಘಟಿತ ವಾತಾವರಣ ಕಾರಣವಾಗಿದೆ. ಸಮಾಜವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಉದ್ಯೋಗ ಸೃಷ್ಠಿಸುವ ವಿಷಯ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುತ್ತಿದೆ. ರಾಜಕೀಯವಾಗಿಯೂ ಸಾಕಷ್ಟು ಹಿಂದುಳಿದಿರುವ ಕಾರಣ ಐಕ್ಯತೆಯಿಂದ ಹೇಗೆ ಸಮುದಾಯವನ್ನು ಸಂಘಟಿಸಬೇಕೆಂಬ ಕುರಿತು ಪಕ್ಷಾತೀತವಾಗಿ ಸಮಾವೇಶ ಆಯೋಜಿಸಲಾಗಿದೆ. ಸುಮಾರು ಐದು ಸಾವಿರಕ್ಕೂ ಅಧಿಕ ಸಮಾಜದ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಪಾಟೀಲ ಪ್ರತಿಪಾದಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ ಮಾತನಾಡಿ ಜನಗಣತಿ ಸಂದರ್ಭದಲ್ಲಿ ಬಾಂಧವರು ಜಾತಿ ಕಾಲಂನಲ್ಲಿ ಮರಾಠಾ ಎಂದು, ಉದ್ಯೋಗ ಕಾಲಂನಲ್ಲಿ ವಕ್ಕಲುತನ ಬರೆಸಬೇಕೆಂಬ ಕುರಿತು ಹೇಳಲಾಗಿತ್ತು. ಹೀಗಾಗಿ ನಮ್ಮ ಸಮಾಜದ ಜನಸಂಖ್ಯೆ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ಸಾಮಾಜಿಕ ಪ್ರಗತಿ ಕುರಿತು ಚಿಂತನ ಮಂಥನ ಸಮಾವೇಶದಲ್ಲಿ ಮಾಡಲಾಗುತ್ತಿದೆ. ನಾವು ಐಕ್ಯತೆಯಿಂದ ಇದ್ದಾಗ ಮಾತ್ರ ಯಾವುದೇ ಸರ್ಕಾರಗಳು ನಮ್ಮ ಮಾತು ಕೇಳುತ್ತವೆ. ಆದ್ದರಿಂದ ಮಹಿಳಾ ಸಬಲೀಕರಣ ಕುರಿತು ಚರ್ಚಿಸಲಾಗುತ್ತಿದೆ. ಸಮಾಜಕ್ಕೆ ಬರುವ ಸವಾಲುಗಳನ್ನು ಎದುರಿಸಲು ಸಮಾಜಕ್ಕೆ ಹೊಸ ದಿಕ್ಕು ಮತ್ತು ವೇಗವನ್ನು ಕಲ್ಪಿಸುವುದು ಬಹಳ ಮುಖ್ಯವಾಗಿದೆ. ನಾವೆಲ್ಲರೂ ಸಮಾಜದ ಜವಾಬ್ದಾರಿಯುತ ಭಾಗವಾಗಿ ಒಂದೆಡೆ ಸೇರೋಣ. ಸಂಘಟನೆ ಮಾಡೋಣ ಎಂದರಲ್ಲದೆ ಇಡೀ ರಾಜ್ಯದಲ್ಲಿ ಹಂತ ಹಂತವಾಗಿ ಮರಾಠಾ ಸಮಾವೇಶಗಳನ್ನು ಮಾಡಲಾಗುತ್ತಿದೆ. ಈ ಸಮಾವೇಶದಲ್ಲಿ ಮಹಿಳೆಯರು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಾಬುರಾವ ಕಾರಬಾರಿ ಮಾತನಾಡಿ ಜಿಲ್ಲೆಯಲ್ಲಿ ಮರಾಠಾ ಸಮಾಜದ ಒಬ್ಬ ಕುಲಗುರುವನ್ನು ಹುಡುಕಲಾಗುತ್ತಿದೆ. ತನ್ಮೂಲಕ ಜಿಲ್ಲೆಯಲ್ಲಿಯೂ ಒಂದು ಮಠ ಸ್ಥಾಪಿಸಿ ಸಮಾಜದ ಬಾಂಧವರಿಗೆ ಧಾರ್ಮಿಕವಾಗಿ ಉತ್ತಮ ಸಂಸ್ಕಾರ ಕೊಡಿಸುವ ಕುರಿತು ನಿರ್ಣಯ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಸಮಾವೇಶದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಪ್ರಮುಖರಾದ ದಿಗಂಬರ ಮಾನಕಾರಿ, ವಕೀಲರಾದ ನಾರಾಯಣ ಗಣೇಶ, ಮುಖಂಡರಾದ ತಾತ್ಯಾರಾವ ಪಾಟೀಲ, ಕಿಶನರಾವ ಪಾಟೀಲ ಇಂಚೂರಕರ್, ಅನೀಲ ಕಾಳೆ, ಕಿರಣ ಬಿರಾದಾರ, ಜನಾರ್ಧನ ಬಿರಾದಾರ, ಶಿವಾಜಿರಾವ ಪಾಟೀಲ, ಪಾಂಡುರಂಗ ಕಣಜಿ, ವೆಂಕಟ ಮೆಂದೆ, ಅಂಗದರಾವ ಜಗತಾಪ, ಅಮರ ಜಾಧವ, ಗೋರಕ ಶ್ರೀಮಾಳೆ, ಪ್ರದೀಪ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

























