
ಬೀದರ್: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಧ್ಯಾನೇಶ್ವರ ನೀರಗುಡೆ ಹಾಗೂ ಬಸವಕಲ್ಯಾಣ ತಾಲ್ಲೂಕು ಆರೋಗ್ಯ ಅಧಿಕಾರಿ ಅಶೋಕ್ ಮೈಲಾರೆ ಅವರ ಅಮಾನತು ಆದೇಶ ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಆಗ್ರಹಿಸಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಮನವಿ ಪತ್ರವನ್ನು ಪರಿಷತ್ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು.
ಬಸವಕಲ್ಯಾಣ ಆಸ್ಪತ್ರೆ ಕಾಮಗಾರಿಯ ಭೂಮಿ ಪೂಜೆ ಬ್ಯಾನರ್ನಲ್ಲಿ ಆರೋಗ್ಯ ಸಚಿವರ ಭಾವಚಿತ್ರ ಹಾಕದೆ, ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂಬ ಕಾರಣ ನೀಡಿ, ಡಿ.ಎಚ್.ಒ. ಹಾಗೂ ಟಿ.ಎಚ್.ಒ. ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆದರೂ, ಪ್ರಭಾವಿ ರಾಜಕಾರಣಿಗಳು ಆರೋಗ್ಯ ಇಲಾಖೆ ಆಯುಕ್ತರ ಮೇಲೆ ಒತ್ತಡ ತಂದು ಹಿಂದುಳಿದ ವರ್ಗಗಳ ವೈದ್ಯರನ್ನು ಅಮಾನತು ಮಾಡಿಸಿದ್ದಾರೆ ಎಂದು ದೂರಿದರು.
ವಾರದೊಳಗೆ ಇಬ್ಬರ ಅಮಾನತು ಆದೇಶ ರದ್ದುಪಡಿಸಿ, ಆಯಾ ಸ್ಥಳಗಳಲ್ಲೇ ಮರು ನೇಮಕ ಮಾಡಬೇಕು. ಇಲ್ಲವಾದಲ್ಲಿ ಮರಾಠ ಹಾಗೂ ಕುರುಬ ಸಮಾಜದ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ದಿಗಂಬರರಾವ್ ಮಾನಕಾರಿ, ಕಾರ್ಯದರ್ಶಿ ವೆಂಕಟೇಶರಾವ್ ಮಾಯಿಂದೆ, ಮರಾಠ ಸಮಾಜದ ಮುಖಂಡರಾದ ಜನಾರ್ಧನ್ ಬಿರಾದಾರ, ಕಿಶನರಾವ್ ಪಾಟೀಲ ಇಂಚೂರ, ದಿಗಂಬರರಾವ್ ಪಾಟೀಲ ಚಾಂದೋರಿ, ತಾತ್ಯಾರಾವ್ ಪಾಟೀಲ, ವೆಂಕಟೇಶರಾವ್ ನೆಲವಾಡೆ, ಸುರೇಶ ಟಾಕಳೆ, ಬಾಬುರಾವ್ ಮಾನಕಾರಿ, ಸುಭಾಷರಾವ್ ವಾಡೆಕರ್, ರೋಹಿತ್ ವೆಂಕಟೇಶರಾವ್, ಶಿವಾಜಿ ಭೋಸ್ಲೆ, ರಾವುಸಾಬ್ ಬಿರಾದಾರ ಮತ್ತಿತರರು ಇದ್ದರು.























