ಮಹಿಳೆ ಕೊಲೆ ಮಾಡಿ ಶವ ಸುಟ್ಟು ಹಾಕಿದ ಆರೋಪಿಗಳ ಬಂಧನ

ಕಲಬುರಗಿ,ಜೂ.9-ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹಲಕರ್ಟಿ ಗ್ರಾಮದಿಂದ ಲಾಡ್ಲಾಪುರಗೆ ಹೋಗುವ ರಸ್ತೆಯಲ್ಲಿರುವ ಜಮೀನಿನಲ್ಲಿ ಮಹಿಳೆ ಶವ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ಎಸ್‍ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೊಲೀಸ್ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಯಾರದ ಸೋಮಲು ತಂದೆ ಠಾಕ್ರು ಪವಾರ (53) ಮತ್ತು ಹಾಮು ಅಲಿಯಾಸ್ ಪಪ್ಪು ತಂದೆ ಲಾಲು ರಾಠೋಡ್ (35) ಎಂಬುವವರನ್ನು ಬಂಧಿಸಿ ಅವರು ಕೃತ್ಯಕ್ಕೆ ಬಳಸಿದ ಓಡನಿ, ಟವಲ್ ಹಾಗೂ ಶವ ಸಾಗಿಸಲು ಬಳಸಿದ ಹೂಂಡೈ ವೆನ್ಯೂ ಕಾರು ಮತ್ತು ಮೃತಳ ತಾಳಿ ಗುಂಡುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.

ಕಗ್ಗಂಟಾದ ಪ್ರಕರಣ

ಸಾಕ್ಷಿ ನಾಶಪಡಿಸಲು ಗುರುತು ಸಿಗದ ಹಾಗೆ ಪೆಟ್ರೋಲ್ ಹಾಕಿ ಮಹಿಳೆಯ ಶವವನ್ನು ಸಂಪೂರ್ಣವಾಗಿ ಸುಟ್ಟು ಹಾಕಲಾಗಿತ್ತು. ಇದರಿಂದಾಗಿ ಈ ಪ್ರಕರಣವನ್ನು ಬೇಧಿಸುವುದು ಸವಾಲಾಗಿತ್ತು. ಈ ಸಂಬಂಧ ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ವಾಡಿ ಪಿಎಸ್‍ಐ ತಿರುಮಲೇಶ, ಸಿಬ್ಬಂದಿಗಳಾದ ಎಎಸ್‍ಐ ಗುಂಡಪ್ಪ, ಶರಣಪ್ಪ ಜಾಂಜಿ, ಲಾಲ್ ಅಹ್ಮದ್, ಚಂದ್ರಶೇಖರ, ವೀರಭದ್ರ, ಲಕ್ಷ್ಮಣ, ಆನಂದ ರಮಣಯ್ಯ, ಬ¯ರಾಮ, ರವೀಂದ್ರ, ಆರೀಫ್, ರಮೇಶ, ಸುನೀಲ, ದೇವು ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ದೇವಿಬಾಯಿ ಕಲೆಯಾದ ಮಹಿಳೆ
ಆರೋಪಿಗಳು ಪೆಟ್ರೋಲ್ ಹಾಕಿ ಮಹಿಳೆಯ ಶವವನ್ನು ಸಂಪೂರ್ಣ ಸುಟ್ಟು ಹಾಕಿದ್ದರಿಂದ ಕೊಲೆಯಾದ ಮಹಿಳೆ ಯಾರು ಎಂಬುವುದು ಗುರುತಿಸುವುದು ಕಷ್ಟವಾಗಿತ್ತು. ಕೊನೆಗೆ ಮಹಿಳೆ ಹೆಸರು ಪತ್ತೆ ಹಚ್ಚಲಾಗಿದ್ದು, ಕೊಲೆಯಾದ ಮಹಿಳೆಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗಣಿಯಾರ ತಾಂಡಾದ ದೇವಿಬಾಯಿ ಗಂಡ ಲಾಲಸಿಂಗ್ ಜಾಧವ್ (42) ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಸಹ ಜೀವನ ನಡೆಸುತ್ತಿದ್ದವರಿಂದಲೆ ಕೊಲೆ

ದೇವಿಬಾಯಿ ಜೊತೆಗೆ ಸಹ ಜೀವನ ನಡೆಸುತ್ತಿದ್ದ ಅದೇ ಗ್ರಾಮದ ಸೋಮಲು ಪವಾರ ಮತ್ತು ಹಾಮು ಅಲಿಯಾಸ್ ಪಪ್ಪು ರಾಠೋಡ್ ಕೂಡಿ ಕೊಲೆ ಮಾಡಿ ಸುಮಾರು 11 ಗಂಟೆಗಳ ಕಾಲ ಶವನನ್ನು ಕಾರಿನಲ್ಲಿ ಇಟ್ಟುಕೊಂಡು ಸುತ್ತಾಡಿ ಯಾವುದಾದರು ನದಿಯಲ್ಲಿ ಹಾಕಬೇಕೆಂದು ಬೇರೆ ಬೇರೆ ಸ್ಥಳಗಳಲ್ಲಿ ತಿರುಗಾಡಿ ಕೊನೆಗೆ ಲಾಡ್ಲಾಪುರ ರಸ್ತೆಯಲ್ಲಿರುವ ಜಮೀನಿನಲ್ಲಿ ಪೆಟ್ರೋಲ್ ಹಾಕಿ ಗುರುತು ಸಿಗದಂತೆ ಮಹಿಳೆ ಶವವನ್ನು ಸುಟ್ಟು ಹಾಕಿದ್ದರು ಎಂದು ವಿವರಿಸಿದರು.
ಕೊಲೆ ರಹಸ್ಯವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ಅವರು ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್‍ಪಿ ಮಹೇಶ ಮೇಘಣ್ಣನವರ, ಶಹಾಬಾದ ಡಿಎಸ್‍ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ವಾಡಿ ಪಿಎಸ್‍ಐ ತಿರುಮಲೇಶ ಉಪಸ್ಥಿತರಿದ್ದರು.