
ಜಮಖಂಡಿ:ತಾಲೂಕಿನ ಜಂಬಗಿ ಬಿ.ಕೆ. ಗ್ರಾಮದ ಕೃಷ್ಣಾ ನದಿ ಸೇತುವೆ ಮೇಲಿಂದ ವ್ಯಕ್ತಿಯೋರ್ವರು ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಜಂಬಗಿ ಬಿ.ಕೆ. ಗ್ರಾಮದ ಸಂಜಯ್ಯ ಕಲ್ಮಠ ಎಂದು ವ್ಯಕ್ತಿಯನ್ನು ಗುರುತಿಸಲಾಗಿದೆ. ಅವರು ತಮ್ಮ ಪತ್ನಿಯೊಂದಿಗೆ ಜಮಖಂಡಿ ನಗರದಲ್ಲಿ ವಾಸವಿದ್ದು, ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಜಂಬಗಿ ಬಿ.ಕೆ. ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಂತೋಷ ಬಾಡಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕೃಷ್ಣಾ ನದಿಯಲ್ಲಿ ಸಂಜಯ್ಯ ಕಲ್ಮಠ ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದರು.
ಸೇತುವೆ ಮೇಲೆ ಬೈಕ್ ಹಾಗೂ ಚಪ್ಪಲಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಘಟನೆಗೆ ನಿಖರ ಕಾರಣ ಹಾಗೂ ಮುಂದಿನ ಮಾಹಿತಿ ಅಧಿಕಾರಿಗಳ ಪರಿಶೀಲನೆಯ ಬಳಿಕ ತಿಳಿದುಬರಬೇಕಿದೆ.






























