Home ಜಿಲ್ಲೆ ಬೆಂಗಳೂರು ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಭೂಮಾಪಕರ ಆಗ್ರಹ

ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಭೂಮಾಪಕರ ಆಗ್ರಹ

ಕೋಲಾರ,ಫೆ,೫- ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಒಂದು ಬಾರಿ ವಿಶೇಷ ನೇಮಕಾತಿಗಾಗಿ ಆಗ್ರಹಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಪರವಾನಿಗೆ ಭೂಮಾಪಕರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ನಡಿಗೆ ಮೂಲಕ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟಿಸಿ ಜಿಲ್ಲಾ ಭೂದಾಖಲೆಗಳ ಉಪ ನಿರ್ದೇಶಕ ಬಿ.ಕೆ.ಸಂಜಯ್ ರವರಿಗೆ ಮನವಿ ಸಲ್ಲಿಸಿದರು.


ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮಾಪಕ ಸಂಘದ ಕೋಲಾರ ಜಿಲ್ಲಾಧ್ಯಕ್ಷ ಶಿವಾನಂದ.ಕೆ ಮಾತನಾಡಿ, ಸರ್ಕಾರಿ ಭೂಮಾಪಕರು ಮಾಡುವ ಕೆಲಸವನ್ನು ಸಮಾನವಾಗಿ ನಾವುಗಳು ಸಹ ಅದೇ ರೀತಿ ಕೆಲಸಗಳನ್ನು ಅಂದರೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ದರಖಾಸ್ತು ಪೊಡಿ, ಕೆರೆ ಅಳತೆ, ನಕ್ಷಾ ಯೋಜನೆ, ಆಕಾರಬಂದ್ ಡಿಜಿಟಲ್, ಸ್ವಾಮಿತ್ವ, ಪೊಡಿ ಅಭಿಯಾನ ಹಾಗೂ ಎಲ್ಲಾ ರೀತಿಯ ಇಲಾಖೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇವೆ. ಆದರೆ ೨೩ವರ್ಷಗಳಿಂದಲು ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ ಹಾಗೂ ವೇತನದಲ್ಲಿ ತಾರತಮ್ಯವಿದ್ದು, ಸರ್ಕಾರಿ ಪರವಾನಿಗೆ ಭೂಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಹಾಗೂ ಒಂದು ಬಾರಿ ವಿಶೇಷ ನೇಮಕಾತಿಯನ್ನು ಈ ಕೂಡಲೇ ಸರ್ಕಾರವು ಈಡೇರಿಸಬೇಕು ಅಲ್ಲಿಯವರೆಗೂ ನಾವು ಯಾವುದೇ ಕೆಲಸವನ್ನು ನಿರ್ವಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.


ಕೋಲಾರ ಜಿಲ್ಲೆಯ ಭೂದಾಖಲೆಗಳ ಉಪ ನಿರ್ದೇಶಕ ಬಿ.ಕೆ.ಸಂಜಯ್ ರವರು ಮನವಿ ಸ್ವೀಕರಿಸಿ ಮಾತನಾಡಿ, ನಿಮ್ಮ ಮನವಿಯನ್ನು ಭೂಮಾಪನ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ಪಿ ಭಾರ್ಗವಲು, ಜಿಲ್ಲಾ ಉಪಾಧ್ಯಕ್ಷ ಎಸ್.ಎನ್. ನರಸಿಂಹಮೂರ್ತಿ, ತಾಲ್ಲುಕು ಅಧ್ಯಕ್ಷರಾದ ಕೋಲಾರ ವಸಂತ್.ವಿ.ಎ, ಬಂಗಾರಪೇಟೆ ಪಾಂಡುರಂಗಯ್ಯ, ಮಾಲೂರು ಚಲುವಯ್ಯ, ಶ್ರೀನಿವಾಸಪುರ ವೇಣು, ಮುಳಬಾಗಿಲು ಸೋಮು, ಕೆಜಿಎಫ್ ನಿತಿನ್ ಹಾಗೂ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಎಲ್ಲಾ ಸರ್ಕಾರಿ ಪರವಾನಗಿ ಭೂಮಾಪಕರು ಉಪಸ್ಥಿತರಿದ್ದರು.