Home ಜಿಲ್ಲೆ ಕಲಬುರಗಿ ಭವಚಕ್ರದ ಮುಕ್ತಿಗೆ ಗುರುವಿಗೆ ಶರಣಾಗಿ: ಗವಿಸಿದ್ದೇಶ್ವರ ಸ್ವಾಮೀಜಿ

ಭವಚಕ್ರದ ಮುಕ್ತಿಗೆ ಗುರುವಿಗೆ ಶರಣಾಗಿ: ಗವಿಸಿದ್ದೇಶ್ವರ ಸ್ವಾಮೀಜಿ

ಮಾದನಹಿಪ್ಪರಗಿ:ಫೆ.9: ಪ್ರಪಂಚದ ಬಳಲಾಟ ತೊಳಲಾಟ ಚಿಂತೆ ನೋವು ನಿರಾಸೆಗಳಿಂದ ಮುಕ್ತಿ ಪಡೆಯಲು ಗುರುವಾಣಿ ಮುಖ್ಯ. ಮನಶುದ್ದಿಗೆ ವಚನ ಪ್ರವಚನ ಆಲಿಸಿ ಭವಚಕ್ರದ ಮುಕ್ತಿ ಪಡೆಯಲು ಸದ್ಗುರುವಿಗೆ ಶರಣಾಗಿರಿ ಎಂದು ಕೊಪ್ಪಳದ ಸಂಸ್ಥಾನ ಗವಿ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು.
ಆಳಂದ ತಾಲೂಕಿನ ಮಾದನಹಿಪ್ಪರಗಿಯ ಸಂಗಮೇಶ್ವರ ಹಾಗೂ ಖಂಡೇಶ್ವರ ದೇವಸ್ಥಾನದ ಮಹಾದ್ವಾರ ಲೋಕಾರ್ಪಣೆ ಹಾಗೂ ಕಳಸಾರೋಹಣ ಅಕ್ಕಮಹಾದೇವಿ ಮತ್ತು ನಂದಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ನಡೆಯುತ್ತಿರುವ 14 ನೇದಿನ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಜ್ಞಾನಿ ಗುರು, ಜಿಜ್ಞಾಸು ಶಿಷ್ಯ ಇವರಿಬ್ಬರ ಸಮಾಗಮವೇ ಮಹಾಸಂಗಮ. ಶಿಷ್ಯನಿಗೆ ಪುರಾಣ ಪ್ರವಚನಗಳು ಗುರುವಿನ ಹಿತನುಡಿಗಳು ಮನದಲ್ಲಿ ಭದ್ರವಾಗಿ ನೆಲೆಸಲು ನಿಂದಕರು ಬಿಡುವುದಿಲ್ಲ. ಅವರ ಚುಚ್ಚು ನುಡಿಗಳಿಂದ ಮನಸ್ಸು ದುರ್ಬಲವಾಗುತ್ತದೆ.ಅದಕ್ಕೆ ಗುರುವಿನ ಸಾಮಿಪ್ಯದಿಂದ ಬದುಕು ಹಸನು ಮಾಡಿಕೊಳ್ಳಿರಿ. ದುಶ್ಚಟಗಳಿಂದ ಶರೀರ ಮತ್ತು ಸಂಸಾರ ನಾಶವಾಗುತ್ತವೆ. ವ್ಯಕ್ತಿಯ ಜೀವನ ಪೂರ್ಣಗೊಳ್ಳಲು ತಾಯಿಯ ಜೋಗುಳ ತಂದೆಯ ಬೈಗುಳ ಇರಲೇಬೆಕು. ಸದ್ಗುರುಗಳ ಸಾಮಿಪ್ಯದಿಂದ ವಚನ ಪ್ರವಚನಗಳಿಂದ ದುಖ ದುರಾಸೆಗಳು ದೂರವಾಗು ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂದರು.
ದಿವ್ಯಸಾನಿಧ್ಯವಹಿಸಿದ ಜಿಡಗಾ ನವ ಕಲ್ಯಾಣ ಮಠದ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ಯಾವುದೇ ಮನಸ್ತಾಪವಿಲ್ಲದೆ ನಂಬಿಕೆ ಪರಸ್ಪರ ಪ್ರೇಮದಿಂದ ಕೂಡಿ ಬಾಳುವ ಮನೆ ಸ್ವರ್ಗಕ್ಕೆ ಸಮಾನ. ಗುರುಗಳ ಮಹಾತ್ಮರ ಮನಸ್ಸು ಗೆದ್ದಿರುವ ಈ ಗ್ರಾಮದ ಭಕ್ತರು ನಿಜಕ್ಕೂ ಧನ್ಯರು. ಇಂತಹ ಅಧ್ಯಾತ್ಮಿಕ ಧಾರ್ಮಿಕ ಜಾತ್ರೆಗಳಲ್ಲಿ ಭಾಗವಹಿಸಿರುವುದು ನೀವು ಪುಣ್ಯವಂತರು ಎಂದರು. ಗುರುಶಾಂತೇಶ್ವರ ಹಿರೆಮಠದ ಶಾಂತವೀರ ಶಿವಾಚಾರ್ಯರು, ಶಿವಲಿಂಗೇಶ್ವರ ಮಠದ ಅಭಿನವ ಶಿವಲಿಂಗ ಸ್ವಾಮಿಗಳು ಮಾತನಾಡಿದರು. ಉಪ್ಪಿನ ಬೆಟಗೇರಿಯ ಕುಮಾರ ವಿರೂಪಾಕ್ಷ ಸ್ವಾಮಿಗಳು ಕಾರ್ಯಕ್ರಮ ನಡೆಸಿಕೊಟ್ಟರು. ಚಿಣಮಗೇರಾದ ವೀರಮಹಾಂತ ಶಿವಾಚಾರ್ಯರು, ಹತ್ತಿಕಣಬಸದ ಪ್ರಭುಶಾಂತಲಿಂಗ ಸ್ವಾಮಿಗಳು, ಸರಸಂಬಾ ಸೋಮೇಶ್ವರ ದೇವರು, ಶಿವಯೋಗಾಶ್ರಮದ ಶಿವದೇವಿ ಮಾತಾಜಿ ವೇದಿಕೆ ಮೇಲಿದ್ದರು. ಮುಖಂಡರಾದ ಸಾತಪ್ಪ ಕೋಳಶೆಟ್ಟಿ, ಶಿವಲಿಂಗಪ್ಪ ಮೈಂದರಗಿ, ಶಿವಪ್ಪ ಕೋಳಶೆಟ್ಟಿ, ಮಲ್ಲಿನಾಥ ಬಂಬಾಸೆ, ಸಿದ್ದರಾಮ ತೋಳನೂರ, ಸಿದ್ದರಾಜು ಆಲೂರೆ, ಶಂಕರೆಪ್ಪ ಮುಗಳಿ, ವಿಶ್ವನಾಥ ಪರೇಣಿ ಇದ್ದರು. ಚಲಗೇರಿ, ಮದಗುಣಕಿ, ದರ್ಗಾಶಿರೂರ, ಝಳಕಿ, ಮೈಂದರಗಿ, ಹಡಲಗಿ, ಇಕ್ಕಳಕಿ, ಅಲ್ಲಾಪುರ, ಭೋಸಗಾ ನಿಂಗದಳ್ಳಿ ಇನ್ನೂ ಅನೇಕ ಗ್ರಾಮಗಳ ಸಾವುರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು.