
ಬೆಂಗಳೂರು, ಜೂ. ೨೯- ಕಾಂಗ್ರೆಸ್ ಪಕ್ಷದಲ್ಲಿನ ಶಾಸಕರ ಅಸಮಾಧಾನ, ಅತೃಪ್ತಿಗಳನ್ನು ಶಮನಗೊಳಿಸಿ ಕಾಂಗ್ರೆಸ್‌ನ ಒಳ ಬೇಗುದಿ, ಆಂತರಿಕ ಕಲಹಗಳಿಗೆ ಮದ್ದು ಅರೆಯಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್‌ದೀಪ್‌ಸಿಂಗ್ ಸುರ್ಜೇವಾಲಾ ಇಂದು ಬೆಂಗಳೂರಿಗೆ ಆಗಮಿಸಲಿದ್ದು, ಎರಡು ದಿನ ಇಲ್ಲಿಯೇ ವಾಸ್ತವ್ಯ ಹೂಡಿ ಎಲ್ಲ ಶಾಸಕರು, ಸಚಿವರ ಜತೆ ಚರ್ಚೆ ನಡೆಸುವರು.
ವಸತಿ ಇಲಾಖೆಯಿಂದ ಮನೆಗಳನ್ನು ಪಡೆಯಲು ಲಂಚ ನೀಡಬೇಕು. ಅಧಿಕಾರಿಗಳು ಶಾಸಕರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ. ಅನುದಾನಗಳ ಕೊರತೆಯಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಿದೆ ಎಂಬ ಕಾಂಗ್ರೆಸ್ ಶಾಸಕರಾದ ಬಿ.ಆರ್. ಪಾಟೀಲ್, ರಾಜುಕಾಗೆ. ಎನ್.ವೈ ಗೋಪಾಲಕೃಷ್ಣ, ಬೇಳೂರು ಗೋಪಾಲಕೃಷ್ಣ ಇವರುಗಳು ಹೇಳಿಕೆಗಳು ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ತರುವ ಜತೆಗೆ ಕಾಂಗ್ರೆಸ್‌ನಲ್ಲಿ ಅಸಮಾಧಾನ, ಅತೃಪ್ತಿ ಇದೆ ಎಂಬುದನ್ನು ಜಗಜ್ಜಾಹೀರುಗೊಳಿಸಿತ್ತು.
ಈ ವಿಚಾರವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ ಶಾಸಕರುಗಳ ಜತೆ ಮಾತನಾಡಿ, ಅವರುಗಳು ಅಸಾಮಾಧಾನವನ್ನು ಆಲಿಸಿ, ಕೂಡಲೇ ಬೆಂಗಳೂರಿಗೆ ತೆರಳಿ ಎಲ್ಲದ್ದಕ್ಕೂ ಪರಿಹಾರ ಕಂಡುಕೊಳ್ಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರಿಗೆ ಹೈಕಮಾಂಡ್ ಸೂಚನೆ ನೀಡಿತ್ತು.
ಹೈಕಮಾಂಡ್‌ನ ಸೂಚನೆ ಬೆನ್ನಲ್ಲೆ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಇಂದು ರಾತ್ರಿ ಬೆಂಗಳೂರಿಗೆ ಆಗಮಿಸುವ ಸುರ್ಜೇವಾಲಾ ಅವರು ೨ ದಿನ ವಾಸ್ತವ್ಯ ಹೂಡಲಿದ್ದು, ನಾಳೆ ಮತ್ತು ನಾಡಿದ್ದು ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ಕುಳಿತು ಅಸಮಾಧಾನಿತ ಶಾಸಕರೂ ಸೇರಿದಂತೆ ಕಾಂಗ್ರೆಸ್‌ನ ಹಲವು ಶಾಸಕರು, ಸಚಿವರುಗಳನ್ನು ಭೇಟಿ ಮಾಡಿ ಅವರ ಅಹವಾಲನ್ನು ಆಲಿಸಿ ಯಾವುದೇ ಸಮಸ್ಯೆಗಳಿದ್ದರೂ ಬಹರಂಗವಾಗಿ ಮಾತನಾಡಬೇಡಿ. ಪಕ್ಷದ ಚೌಕಟ್ಟಿನಲ್ಲೇ ಎಲ್ಲವನ್ನೂ ಬಗೆರಹರಿಸಿಕೊಳ್ಳಿ ಎಂದು ಕಟ್ಟಪ್ಪಣೆ ಮಾಡುವರು.
ಸಚಿವರುಗಳಿಗೂ ಕಿವಿಮಾತು
ಬರುವ ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯಾಗಲಿದೆ. ರಾಜಕೀಯ ಬದಲಾವಣೆಗಳಾಗಲಿವೆ ಎಂದು ಸಚಿವ ರಾಜಣ್ಣ ಸೇರಿದಂತೆ ಕೆಲವರು ಬಹಿರಂಗವಾಗಿ ಮಾತನಾಡಿರುವುದನ್ನೂ ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್, ಈ ಸಚಿವರುಗಳ ಜತೆಯೂ ಮಾತನಾಡಿ ಅಧಿಕಾರ ಹಂಚಿಕೆ, ಮುಖ್ಯಮಂತ್ರಿಗಳ ಬದಲಾವಣೆ ಸೇರಿದಂತೆ ಯಾವುದೇ ವಿಚಾರವಾಗಿ ಬಹಿರಂಗವಾಗಿ ಮಾತನಾಡಬೇಡಿ. ಜವಾಬ್ದಾರಿ ಸ್ಥಾನದಲ್ಲಿದ್ದೀರಿ. ಜವಾಬ್ದಾರಿಯಿಂದ ಮಾತನಾಡಿ ಎಂದು ರಣದೀಪ್‌ಸಿಂಗ್ ಸುರ್ಜೇವಾಲಾ ಕಿವಿಮಾತು ಹೇಳುವರು ಎನ್ನಲಾಗಿದೆ.
ಸಿಎಂ-ಡಿಸಿಎಂ ಜತೆಗೂ ಚರ್ಚೆ
ಎರಡು ದಿನ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವ ರಣದೀಪ್‌ಸಿಂಗ್ ಸುರ್ಜೇವಾಲಾ ಅಸಮಾಧಾನಿಕ ಶಾಸಕರು ಹಾಗೂ ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ಜತೆ ಮಾತನಾಡಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಜತೆಗೂ ಚರ್ಚೆ ನಡೆಸಿ ಶಾಸಕರುಗಳ ಅಹವಾಲನ್ನು ಇವರ ಗಮನಕ್ಕೆ ತರುವರು ಎಂದು ಹೇಳಲಾಗಿದೆ.