
ಔರಾದ್ :ಮೇ.೧೪:ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ಎಸ್‌ಐಆರ್ ಹಾಗೂ ಇವಿಎಂ ರದ್ದತಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಗೋಪಾಲ್ ಸಿಂಗ್ ಠಾಕೂರ್ ನಡೆಸುತ್ತಿರುವ ಏಕಾಂಗಿ ಉಪವಾಸ ಸತ್ಯಾಗ್ರಹಕ್ಕೆ ಬೀದರ್ ಜಿಲ್ಲಾ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಸದಸ್ಯರು ಬುಧವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಪ್ರಮುಖರು, “ಪ್ರಜಾಪ್ರಭುತ್ವ ನಮ್ಮೆಲ್ಲರ ಜೀವ ಇದ್ದಂತೆ. ಅದು ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಎಸ್‌ಐಆರ್ ಹೆಸರಿನಲ್ಲಿ ಮತದಾರರ ಹಕ್ಕು ಕಸಿದುಕೊಳ್ಳುವ ಸಂವಿಧಾನ ವಿರೋಧಿ ಪ್ರಕ್ರಿಯೆ ಖಂಡನೀಯವಾಗಿದೆ. ಗೋಪಾಲ್ ಸಿಂಗ್ ಠಾಕೂರ್ ಅವರು ನಡೆಸುತ್ತಿರುವ ಸತ್ಯಾಗ್ರಹಕ್ಕೆ ನಾವು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ” ಎಂದು ಹೇಳಿದರು.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಲು ಪಾರದರ್ಶಕ ಚುನಾವಣಾ ವ್ಯವಸ್ಥೆ ಅಗತ್ಯವಾಗಿದ್ದು, ಎಸ್‌ಐಆರ್ ಹಾಗೂ ಇವಿಎಂ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಔರಾದ್‌ನಲ್ಲಿ ಶೀಘ್ರದಲ್ಲೇ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಗೋಪಾಲ್ ಸಿಂಗ್ ಠಾಕೂರ್ ಮಾತನಾಡಿ, “ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು ಮತದಾರರ ಹಕ್ಕು ಕಸಿದುಕೊಳ್ಳುವ ತಂತ್ರವಾಗಿ ಪರಿಣಮಿಸಿದ್ದು, ಇದರ ಪರಿಣಾಮವಾಗಿ ಲಕ್ಷಾಂತರ ಜನರು ತಮ್ಮ ಅಮೂಲ್ಯ ಮತದಾನ ಹಕ್ಕನ್ನು ಕಳೆದುಕೊಂಡಿದ್ದಾರೆ” ಎಂದು ಆರೋಪಿಸಿದರು.
“ಪ್ರಜಾಪ್ರಭುತ್ವದ ಮೂಲ ಆಧಾರವಾದ ಮತದಾನದ ಹಕ್ಕಿಗೆ ಧಕ್ಕೆಯುಂಟು ಮಾಡುವ ಎಸ್‌ಐಆರ್ ಹಾಗೂ ಇವಿಎಂ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಪ್ರಜಾತಂತ್ರದ ಮೌಲ್ಯಗಳನ್ನು ಉಳಿಸಬೇಕು ಎಂಬ ಉದ್ದೇಶದಿಂದ ನಾನು ಈ ಹೋರಾಟ ನಡೆಸುತ್ತಿದ್ದೇನೆ. ನನ್ನ ಉಪವಾಸ ಸತ್ಯಾಗ್ರಹ ಇಂದು ೧೧ನೇ ದಿನ ಪೂರೈಸಿದ್ದು, ಮುಂದಿನ ೨೧ ದಿನಗಳವರೆಗೆ ನಿರಂತರವಾಗಿ ಮುಂದುವರಿಯಲಿದೆ” ಎಂದು ಹೇಳಿದರು.
ಈ ವೇಳೆ ಎಸ್‌ಐಆರ್ ವಿರೋಧಿ ಜನಾಂದೋಲನ ಸಮಿತಿಯ ಪ್ರಮುಖರಾದ ಅಬ್ದುಲ್ ಮನ್ನಾನ್ ಸೇಠ್, ಓಂಪ್ರಕಾಶ್ ರೊಟ್ಟೆ, ನಿಜಾಮೊದ್ದೀನ್, ಡಾ. ಮಕ್ಸೂದ್ ಚಂದಾ, ಬಂಟಿ ದರ್ಬಾರೆ, ರಾಹುಲ್ ಖಂದಾರೆ, ಡಾ. ಫಯಾಜ್, ಸಂತೋಷ್ ಸೂರ್ಯವಂಶಿ, ಸಂತೋಷ ಸಿಂಧೆ, ದಿನೇಶ್, ಅಮೀರೋದ್ದೀನ್ ಸೇರಿದಂತೆ ಅನೇಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹಕ್ಕೆ ಐಕ್ಯತೆ ಸೂಚಿಸಿದರು.


























