
ಬೆಂಗಳೂರು.ಮಾ-೧೪.-ನಗರದಲ್ಲಿ ಉತ್ಪತ್ತಿಯಾಗುವ ಹಸಿ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಇಂಧನವಾಗಿ ಬಳಸುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯಲ್ಲಿ ಇನ್ನಷ್ಟು ಜೈವಿಕ ಅನಿಲ (ಬಯೋಗ್ಯಾಸ್) ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿರುವ ಕಸ?ರಸ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ಹೆಚ್ಚಿಸಲು ಸಮಗ್ರ ಅಧ್ಯಯನ ನಡೆಸಿ ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ವಿಕೇಂದ್ರೀಕೃತ ಕಸದ ಸಂಸ್ಕರಣಾ ಕೇಂದ್ರಗಳನ್ನು ಸ್ಥಾಪಿಸಲು ೨ ರಿಂದ ೩ ಎಕರೆ ಜಾಗ ಅಗತ್ಯವಿದೆ. ಆದರೆ ಕಡಿಮೆ ಅವಧಿಯಲ್ಲಿ ಈಗಿರುವ ಘಟಕಗಳನ್ನು ಉನ್ನತೀಕರಿಸಿ ಅಲ್ಲಿ ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಸ್ಥಳೀಯ ಹೋಟೆಲ್‌ಗಳಿಗೆ ವಿತರಿಸುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ನಗರದಲ್ಲಿ ಹಸಿ ಹಾಗೂ ಒಣ ತ್ಯಾಜ್ಯವನ್ನು ಮೂಲದಲ್ಲೇ ವಿಂಗಡಿಸಿದರೆ ಕಸದ ಸಂಸ್ಕರಣೆ ಸುಗಮವಾಗಲಿದೆ. ಈ ನಿಟ್ಟಿನಲ್ಲಿ ನಾಗರಿಕರು ಸಹಕಾರ ನೀಡುವುದು ಅತ್ಯಂತ ಮುಖ್ಯ ಎಂದು ಅವರು ಮನವಿ ಮಾಡಿದರು.
ಹೋಟೆಲ್‌ಗಳಿಗೆ ಬಯೋಗ್ಯಾಸ್ ಪೂರೈಕೆ
ಕೋರಮಂಗಲದ ಕಸ?ರಸ ಘಟಕದಲ್ಲಿ ದಿನಕ್ಕೆ ಸುಮಾರು ೧೦ ಟನ್ ಹಸಿ ತ್ಯಾಜ್ಯ ಸಂಸ್ಕರಿಸಿ ಬಯೋಗ್ಯಾಸ್ ಉತ್ಪಾದನೆ ಮಾಡಲಾಗುತ್ತಿದೆ. ೮.೫ ಟನ್ ಸಾಮರ್ಥ್ಯದ ಘಟಕದಿಂದ ಸಮೀಪದ ಹೋಟೆಲ್‌ಗೆ ದಿನಕ್ಕೆ ಸುಮಾರು ೧೨೦ ಕೆಜಿ ಬಯೋಗ್ಯಾಸ್ ಪೂರೈಕೆ ಮಾಡಲಾಗುತ್ತಿದ್ದು, ಪ್ರತಿ ಕೆಜಿಗೆ ರೂ.೭೦ರಂತೆ ದಿನಕ್ಕೆ ಸುಮಾರು ರೂ.೮,೪೦೦ ಆದಾಯ ಲಭ್ಯವಾಗುತ್ತಿದೆ.
ಈ ಪ್ರದೇಶದಲ್ಲಿರುವ ಹೈಟೆನ್ಷನ್ ವಿದ್ಯುತ್ ಲೈನ್ ಸ್ಥಳಾಂತರಿಸಿದರೆ ಇನ್ನಷ್ಟು ಪ್ರಮಾಣದಲ್ಲಿ ಬಯೋಗ್ಯಾಸ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಹೇಶ್ವರ್ ರಾವ್ ಹೇಳಿದರು.
ಬಯೋಮೆಥನೈಸೇಷನ್ ಘಟಕಗಳ ವಿಸ್ತರಣೆ
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಮಾತನಾಡಿ, ಬಿಬಿಎಂಪಿ ನಿರ್ಮಿಸಿದ್ದ ೧೨ ಬಯೋಗ್ಯಾಸ್ ಘಟಕಗಳಲ್ಲಿ ಪ್ರಸ್ತುತ ೬ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಘಟಕದಲ್ಲಿ ದಿನಕ್ಕೆ ೫ ಟನ್ ಹಸಿ ತ್ಯಾಜ್ಯ ಸಂಸ್ಕರಿಸಿ ಒಟ್ಟಾರೆ ಸುಮಾರು ೩೦ ಟನ್ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ ನಡೆಯುತ್ತಿದೆ ಎಂದು ತಿಳಿಸಿದರು.
ಉಳಿದ ೬ ಘಟಕಗಳನ್ನು ನವೀಕರಣಗೊಳಿಸುವ ಕಾಮಗಾರಿ ನಡೆಯುತ್ತಿದ್ದು, ಪ್ರತಿ ಟನ್ ಹಸಿ ತ್ಯಾಜ್ಯದಿಂದ ೩೦ ರಿಂದ ೫೦ ಕೆಜಿ ಬಯೋಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದರು.
ಹೊಸ ಘಟಕಗಳಿಗೆ ಚಾಲನೆ
ನಗರದಲ್ಲಿ ಹೊಸದಾಗಿ ನಾಲ್ಕು ವಿಕೇಂದ್ರೀಕೃತ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ವಾರ್ಡ್ ೧೫೧ ಹಾಗೂ ೨೭ರಲ್ಲಿ ನಿರ್ಮಾಣಗೊಂಡ ಎರಡನೆಯ ಘಟಕಗಳು ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿವೆ. ವಾರ್ಡ್ ೧೯೬ ಮತ್ತು ೫೬ರಲ್ಲಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಇದಲ್ಲದೆ ಗೇಲ್ ಗ್ಯಾಸ್ ಇಂಡಿಯಾ ಕಂಪನಿಯ ಸಹಯೋಗದಲ್ಲಿ ದಿನಕ್ಕೆ ಸುಮಾರು ೩೦೦ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯದ ಬೃಹತ್ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಕನ್ನಹಳ್ಳಿ ಪ್ರದೇಶದಲ್ಲಿ ೧೦೦೦ ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಮತ್ತೊಂದು ಘಟಕ ಸ್ಥಾಪನೆಗೆ ಮೆ. ಸಾತರಾಂ ಸಂಸ್ಥೆಯೊಂದಿಗೆ ಒಪ್ಪಂದಕ್ಕೂ ಅನುಮೋದನೆ ನೀಡಲಾಗಿದೆ.
ಬಯೋ-ಅಓಉ ರೂಪದಲ್ಲಿ ಮಾರಾಟ
ಹೇರೋಹಳ್ಳಿ ಪ್ರದೇಶದಲ್ಲಿರುವ ಘಟಕದಲ್ಲಿ ದಿನಕ್ಕೆ ೫೦ ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದ್ದು, ಸುಮಾರು ೧೫೦೦ ಕೆಜಿ ಗ್ಯಾಸ್ ಉತ್ಪಾದನೆಯಾಗುತ್ತಿದೆ. ಈ ಗ್ಯಾಸ್ ಅನ್ನು ಬಯೋ-ಅಓಉ ರೂಪದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಪೈಪ್‌ಲೈನ್ ಮೂಲಕ ಮನೆಮನೆಗೆ ತಲುಪಿಸುವ ಯೋಜನೆಯೂ ರೂಪಿಸಲಾಗುತ್ತಿದೆ.
ನಗರದಲ್ಲಿ ಉತ್ಪತ್ತಿಯಾಗುವ ಸುಮಾರು ೩೦೦೦ ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಯೋಜನೆಯನ್ನು ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಯಲ್ಲಿ ಒಳಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮನೆಮಟ್ಟದಲ್ಲಿಯೂ ಘಟಕ ಸಾಧ್ಯ
ಮನೆಮಟ್ಟದಲ್ಲಿಯೂ ಸಣ್ಣ ಬಯೋಗ್ಯಾಸ್ ಘಟಕಗಳನ್ನು ಅಳವಡಿಸಬಹುದಾಗಿದ್ದು, ಸುಮಾರು ರೂ.೨೦,೦೦೦ ವೆಚ್ಚದಲ್ಲಿ ಮನೆಯಲ್ಲೇ ಉತ್ಪತ್ತಿಯಾಗುವ ಹಸಿ ತ್ಯಾಜ್ಯದಿಂದ ಗ್ಯಾಸ್ ಉತ್ಪಾದಿಸಿ ಅಡುಗೆ ಇಂಧನವಾಗಿ ಬಳಸಬಹುದು ಎಂದು ಅಧಿಕಾರಿಗಳು ತಿಳಿಸಿದರು.
ಈ ವೇಳೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ರಮೇಶ್ ಕೆ.ಎನ್., ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.























