
ಚಿಂಚೋಳಿ: ತಾಲ್ಲೂಕಿನ ಹೋಬಳಿ ಘಟಕಗಳಲ್ಲೊಂದಾದ ಹಾಗೂ ಪ್ರಮುಖ ವಾಣಿಜ್ಯ ಕೇಂದ್ರವಾದ ಸುಲೇಪೇಟನಲ್ಲಿ ರಸ್ತೆಗಳು ಹಾಳಾಗಿದ್ದು ಇಲ್ಲಿನ ಪ್ರಯಾಣಿಕರು ದಿನನಿತ್ಯ ಸಂಚರಿಸಲು ಹೈರಾಣಾಗುವಂತಾಗಿದೆ. ತಾಲ್ಲೂಕಿನಲ್ಲಿ ವಾಣಿಜ್ಯದ ಮಾರುಕಟ್ಟೆಗೆ ಮತ್ತು ವಿವಿಧ ಕಾರಣಗಳಿಂದ ಪ್ರಸಿದ್ದಿ ಪಡೆದಂತಹ ಸುಲೇಪೇಟ ಗ್ರಾಮವು ಚಿಂಚೋಳಿ ತಾಲ್ಲೂಕಿನಲ್ಲಿದ್ದರೂ ಸಹ ಸೇಡಂ ಮತಕ್ಷೇತ್ರಕ್ಕೆ ಒಳಪಡುವಂತಹ ಗ್ರಾಮವಾಗಿದೆ. ಈ ಗ್ರಾಮವು ಚಿಂಚೋಳಿಯಿಂದ ಕಲಬುರಗಿ ಮತ್ತು ಸೇಡಂಗಳಂತಹ ನಗರಗಳಿಗೆ ಸಂಪರ್ಕ ಕಲ್ಪಿಸುವಂತಹ ಮಧ್ಯದ ಗ್ರಾಮವಾಗಿದ್ದರಿಂದ ಸಂಪರ್ಕ ಸೇತುವೆಯಂತಹ ಗ್ರಾಮವೆಂದೇನಿಸುಕೊಳ್ಳುತ್ತದೆ. ಅಲ್ಲದೇ ಸುಲೇಪೇಟ ಗ್ರಾಮವು ಅತೀ ಹೆಚ್ಚು ಹಳ್ಳಿಗಳನ್ನು ಹೊಂದಿರುವಂತಹ ಹೋಬಳಿ ಘಟಕಗಳಲ್ಲಿ ಒಂದಾಗಿದ್ದು, ದಿನ ಬೆಳಗಾದರೆ ವಿವಿಧ ಹಳ್ಳಿಗಳಿಂದ ವ್ಯಾಪಾರ-ವಹಿವಾಟುಗಳಿಗಾಗಿ, ಶಾಲಾ ಕಾಲೇಜುಗಳಿಗಾಗಿ ವಿದ್ಯಾರ್ಥಿಗಳು,ಜನರು ಬಂದು ಹೋಗುತ್ತಾರೆ. ಇಂತಹ ಮುಖ್ಯ ಕೇಂದ್ರಕ್ಕೆ ಸಾರ್ವಜನಿಕರು ತಮ್ಮ ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಸಂಚರಿಸುವ ರಸ್ತೆಗಳು ಹಾಳಾಗಿದ್ದು ಅವರನ್ನು ಹೈರಾಣಗೋಳಿಸುವಂತಾಗಿವೆ. ಗ್ರಾಮದ ಬಸ್ ನಿಲ್ದಾಣದಿಂದ ಸೇಡಂ ರಸ್ತೆಯ ಕಡೆಗೂ ಹಾಗೂ ಜಿಲ್ಲಾ ಕೇಂದ್ರವಾದ ಕಲಬುರಗಿಯ ಕಡೆಗೆ ಸಂಚರಿಸುವ ಮಾರ್ಗದ ಕಡೆಗೂ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು ಸಂಚರಿಸಲು ವಾಹನಗಳು ಕಷ್ಟಪಡುವಂತಾಗಿವೆ. ಇತ್ತೀಚಿಗೆ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿಯಂತೂ ರಸ್ತೆಯಲ್ಲಿನ ಹೊಂಡಗಳಲ್ಲಿ ಮಳೆ ನೀರು ನಿಂತುಕೊಳ್ಳುತ್ತಿದ್ದು, ವಾಹನ ಸವಾರರಿಗೆ ರಸ್ತೆಯಲ್ಲಿನ ಗುಂಡಿಗಳ ಆಳದ ಪ್ರಮಾಣ ಗೊತ್ತಾಗದೆ ಅನಾಹುತದ ಬಾಯೊಳಗೆ ಹೋಗಿ ಬರುವಂತಾಗಿದೆ. ಇನ್ನು ದ್ವಿಚಕ್ರ ವಾಹನ ಸವಾರರ ಕಷ್ಟವಂತೂ ಹೇಳತಿರದಾಗಿದೆ. ಇರುವ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾದ ಮೇಲೆ ಸಂಚರಿಸಲು ಯೋಗ್ಯವಾದ ರಸ್ತೆಯ ಅಳತೆ ಚಿಕ್ಕದಾಗುತ್ತದೆ. ಆ ಚಿಕ್ಕ ರಸ್ತೆಯಲ್ಲೇ ಬಸ್,ಲಾರಿಗಳಂತಹ ದೊಡ್ಡ ವಾಹನಗಳು ಎದುರುಬದುರಾದರೆ, ತಕ್ಷಣಕ್ಕೆ ಅನಿವಾರ್ಯವಾಗಿ ರಸ್ತೆಯಲ್ಲಿನ ಹೊಂಡಗಳಲ್ಲೇ ವಾಹನವನ್ನು ಮುನ್ನಡೆಸಬೇಕಾಗುತ್ತದೆ. ಇಂತಹ ಹಾಳಾದ ರಸ್ತೆಯ ಪರಿಣಾಮದಿಂದಾಗಿ ವಾಹನ ಸವಾರರು ಜೀವವನ್ನು ಕೈಯಲ್ಲಿಟ್ಟುಕ್ಕೊಂಡು ಸಂಚರಿಸಬೇಕಾದಂತಹ ಪರಿಸ್ಥಿತಿಯುಂಟಾಗಿದೆ. ರಸ್ತೆಯಲ್ಲಿನ ಹೊಂಡಗಳಲ್ಲಿ ನೀರು ನಿಂತುಕೊಳ್ಳುತ್ತಿರುವುದರಿಂದ ಸೊಳ್ಳೆಗಳು ಹುಟ್ಟಿಕೊಂಡು ವಿಪರೀತವಾದ ಕಾಟ ಕೊಡುತ್ತಿರುವುದಷ್ಟೇ ಅಲ್ಲದೇ, ನಿಂತ ನೀರಿನಿಂದ ಹೊಲಸು ವಾಸನೆ ಕೂಡ ಬರುವಂತಾಗಿದೆ. ಈ ಹೊಲಸು ವಾಸನೆಯಿಂದ ರಸ್ತೆಯ ಸುತ್ತಮುತ್ತಲಲ್ಲಿರುವ ಹೋಟೆಲ್ ಗಳಲ್ಲಿ ಊಟ ತಿಂಡಿ ತಿನ್ನುವ ಜನರಿಗೂ ಕೊಳಚೆನೀರಿನ ವಾಸನೆ ಬಂದು ಜನರು ಹೋಟೆಲ್ ಗಳಲ್ಲಿ ಊಟ ತಿಂಡಿ ಸೇವನೆಯನ್ನು ಸಹ ಮಾಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಮಳೆಗಾಲದ ಆರಂಭವಾಗುತ್ತಿರುವುದರಿಂದ ಈಗಲಾದರೂ, ಸಂಬಂಧಪಟ್ಟ ಅಧಿಕಾರಿಗಳು,ಜನಪ್ರತಿನಿಧಿಗಳು ಈ ಸಮಸ್ಯೆಯತ್ತ ಕಣ್ಣರಳಿಸಿ ನೋಡಿ ಅನಾಹುತಗಳು ಜರುಗುವ ಮುಂಚೆ ಎಚ್ಚೆತ್ತುಕೊಂಡು ರಸ್ತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು, ಹಾಗೂ ವಾಹನ ಸವಾರರು ಹಿಡಿ ಶಾಪವನ್ನು ಹಾಕುತ್ತಿದ್ದಾರೆ.
ಗ್ರಾಮದ ಯಾವುದೋ ಒಂದು ಮೂಲೆಯಲ್ಲಿ ಈ ರೀತಿಯಾಗಿ ರಸ್ತೆಗಳು ಹದಗೆಟ್ಟಿದ್ದರೆ ನಿರ್ಲಕ್ಷ್ಯ ವಹಿಸುತ್ತಾರೆ ಎಂಬುದು ವಾಡಿಕೆಯಾಗಿತ್ತು.ಆದರೇ, ಗ್ರಾಮದ ಕೇಂದ್ರ ಬಿಂದುವಾದ ಬಸ್ ನಿಲ್ದಾಣದ ಎದುರಿಗೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿ ಅದರಲ್ಲಿ ನೀರು ನಿಂತುಕೊಳ್ಳುತ್ತಿವೆ. ಇದರಿಂದ ಕೊಳಚೆ ವಾಸನೆ ಬರುತ್ತಿದೆ.ಸೊಳ್ಳೆಗಳ ಕಾಟವು ಹೆಚ್ಚಾಗುತ್ತಿದೆ. ವಾಹನ ಸವಾರರಿಗೆ ತೊಂದರೆಯಾಗುವ ಜೊತೆ ಜೊತೆಗೆ ರಸ್ತೆಯ ಪಕ್ಕದಲ್ಲಿರುವ ಹೋಟೆಲ್ ಗಳಿಗೆ ತಿಂಡಿ ತಿನ್ನಲು ಬರುವಂತಹ ಜನರಿಗೆ ನಿಂತ ನೀರಿನ ವಾಸನೆಯಿಂದ ತೊಂದರೆಯುಂಟಾಗುತ್ತಿದೆ.ಹೋಟೆಲ್ ವ್ಯಾಪರಕ್ಕೂ ತೊಂದರೆಯುಂಟಾಗುತ್ತಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಪರಿಹರಿಸುವಂತೆ ಕ್ರಮಕೈಗೊಳ್ಳಲಿ.
ಹಫೀಜ್ ಸರ್ದಾರ್
ಹೋಟೆಲ್ ಉದ್ಯಮಿ ಸುಲೇಪೇಟ. ಅಆ