ಪ್ರತಿ ಎಕರೆಗೆ 100 ಟನ್ ಕಬ್ಬು ಇಳುವರಿ ಸಾಧ್ಯ: ಬಸವರಾಜ ಪಾಟೀಲ್ ಕೊರಳ್ಳಿ

ಕಲಬುರಗಿ:ಆ.12-ಕಬ್ಬು ಬೆಳೆಯುವ ರೈತರು ಸಾಂಪ್ರದಾಯಿಕ ಶೈಲಿಯ ಬದಲು ವೈಜ್ಞಾನಿಕ ಅನುಷ್ಠಾನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರತಿ ಎಕರೆಯಲ್ಲಿ 100 ಟನ್‍ಗೂ ಹೆಚ್ಚು ಕಬ್ಬು ಇಳುವರಿ ಪಡೆಯಲು ಸಾಧ್ಯವಿದೆ ಎಂದು ಪ್ರಗತಿಪರ ರೈತ ಹಾಗೂ ಆಳಂದ ಪಟ್ಟಣದ ಸಾಯಿಶರಣ ಕೃಷಿ ಕೇಂದ್ರ ಸಂಚಾಲಕ ಬಸವರಾಜ ಪಾಟೀಲ್ ಕೊರಳ್ಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸಾಯಿಶರಣ ಕೃಷಿ ಕೇಂದ್ರದ ವತಿಯಿಂದ ಕಬ್ಬು ಬೆಳೆಯುವ ರೈತರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ಈ ದಿಸೆಯಲ್ಲಿ ಆಳಂದ ತಾಲೂಕಿನ ಭೂಸನೂರ ಸಮೀಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ (ಎನ್‍ಎಸ್‍ಎಲ್ ಶುಗರ್ಸ್ ಲಿಮಿಟೆಡ್) ಸಹ ರೈತರೊಂದಿಗೆ ಈ ಜೋಡಿಸಲು ಮುಂದೆ ಬರುವುದಾಗಿ ಆಶ್ವಾಸನೆ ನೀಡಿರುವುದು ಆಶಾದಾಯಕ ಬೆಳವಣಿಗೆ ಎಂದು ಸಮಾಧಾನ ವ್ಯಕ್ತಪಡಿಸಿದರು.
ಇದೇ ಆಗಸ್ಟ್ 6ರಂದು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪಿ.ಪ್ರಸಾದ್‍ಬಾಬು ಅವರು ತಡಕಲ್ ಸಮೀಪದ ಮೂರು ಎಕರೆ ಹಾಗೂ ಆಳಂದ ಬಳಿಯಿರುವ ಐದು ಎಕರೆ ಕಬ್ಬು ಪ್ರಾತ್ಯಕ್ಷಿಕಾ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ವೈಜ್ಞಾನಿಕವಾಗಿ ಕಬ್ಬು ಬೆಳೆದಿರುವ ಒಂಬತ್ತು ತಳಿಯ ಕಬ್ಬಿನ ಫಸಲು ಕಂಡು ಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇವೇಳೆ, ಪ್ರತಿ ಎಕರೆ ಪ್ರದೇಶದಲ್ಲಿ 100 ಟನ್‍ಗೂ ಹೆಚ್ಚು ಕಬ್ಬು ಇಳುವರಿ ಪಡೆಯಬಹುದು ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂದು ಕೊರಳ್ಳಿ ವಿವರಿಸಿದರು.
ಪ್ರತಿ ಎಕರೆ ಪ್ರದೇಶದಲ್ಲಿ 100 ಟನ್‍ಗೂ ಹೆಚ್ಚು ಕಬ್ಬು ಇಳುವರಿ ಪಡೆಯಬೇಕಾದರೆ ರೈತರು ಸಕಾಲಕ್ಕೆ ರಸಗೊಬ್ಬರ ಖರೀದಿಸಲು ಅನುಕೂಲವಾಗುವಂತೆ ಪ್ರತಿ ಎಕರೆಗೆ ರೂ.75 ಸಾವಿರ ಮುಂಗಡ ಹಣ ನೀಡಬೇಕೆಂದು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಸಿಇಒ ಅವರನ್ನು ಕೋರಲಾಗಿದೆ. ಈ ಪ್ರಸ್ತಾವನೆಗೆ ಸಿಇಒ ಪ್ರಸಾದ್ ಬಾಬು ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನುಡಿದರು.
ಕಬ್ಬು ನಾಟಿ ಮಾಡುವ ರೈತರು ಪ್ರತಿ ಎಕರೆಯಲ್ಲಿ ಉತ್ತಮ ಇಳುವರಿ ಪಡೆಯಬೇಕಾದರೆ ಕಾಲಕಾಲಕ್ಕೆ ರಸಗೊಬ್ಬರ ಪೂರೈಸಬೇಕಾಗುತ್ತದೆ. ಆದರೆ, ಬಹುತೇಕ ರೈತರು ಕಬ್ಬು ನಾಟಿ ಬಳಿಕ ಕೈ ಖಾಲಿ ಮಾಡಿಕೊಂಡಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಲಕಾಲಕ್ಕೆ ಕಬ್ಬಿಗೆ ರಸಗೊಬ್ಬರ ನೀಡುವುದು ಬಹುತೇಕ ಸಂದರ್ಭಗಳಲ್ಲಿ ಕಷ್ಟಸಾಧ್ಯವಾಗುತ್ತದೆ. ಹೀಗಾಗಿ, ರೈತರು ‘ಬಂದಷ್ಟೇ ಬರಲಿ’ ಎಂದು ಕೈಚೆಲ್ಲುವ ಅಸಹಾಯಕ ಸ್ಥಿತಿ ಅನಿವಾರ್ಯವಾಗಿ ಎದುರಾಗುತ್ತದೆ. ಆದ್ದರಿಂದ ರೈತರ ಈ ಸ್ಥಿತಿಯನ್ನು ಅರ್ಥ ಮಾಡಿಕೊಂಡು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ನಾಟಿ ಸಂದರ್ಭದಲ್ಲಿ ಪ್ರತಿ ಎಕರೆಗೆ ಅತ್ಯಂತ ಕನಿಷ್ಠ ಪ್ರಮಾಣದ ಮುಂಗಡ ನೀಡುತ್ತಿದ್ದು, ಇದರ ಬದಲು ಪ್ರತಿ ಎಕರೆಗೆ ರೂ.75 ಸಾವಿರ ಮುಂಗಡ ಹಣ ನೀಡಬೇಕು. ಮುಂದೆ ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಕಬ್ಬು ಪೂರೈಸಿದಾಗ ರೈತರಿಗೆ ಅದಾಗಲೇ ನೀಡಿರುವ ಮುಂಗಡ ಹಣವನ್ನು ಕಬ್ಬಿನ ಬಿಲ್ ಜೊತೆಗೆ ಹೊಂದಿಸಿಕೊಂಡು ಬಾಕಿ ಬಿಲ್ ನೀಡಬಹುದಾಗಿದೆ ಎಂಬ ನಮ್ಮ ಸಲಹೆಗೆ ಸಿಇಒ ಪ್ರಸಾದ್‍ಬಾಬು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳಲ್ಲಿ ಸುಮಾರು 2000 ರೈತರನ್ನು ಒಳಗೊಂಡ ಸಭೆ ಕರೆದು ಮತ್ತೊಮ್ಮೆ ಸುದೀರ್ಘ ಚರ್ಚೆ ನಡೆಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ಕಬ್ಬು ಬೆಳೆಯುವ ರೈತರಾದ ಮಲ್ಲಿಕಾರ್ಜುನ ತಡಕಲ್, ಶರಣಗೌಡ ಪಾಟೀಲ್ ಹಳ್ಳಿಸಲಗರ, ಲಿಂಗರಾಜ ಪಾಟೀಲ್ ಝಳಕಿ ಹಾಗೂ ಶರಣಗೌಡ ಪಾಟೀಲ್ ಕೂಡಲ ಹಂಗರಗಾ ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
…………
ಕ್ರಮಬದ್ಧ ಶ್ರಮದಿಂದ ಅಧಿಕ ಇಳುವರಿ
ಪ್ರಸ್ತುತ ಆಳಂದ ತಾಲೂಕಿನ ಕಡಗಂಚಿ, ನಿಂಬರ್ಗಾ ಮತ್ತು ಆಳಂದ ವಿಭಾಗದಲ್ಲಿ ಸುಮಾರು 17000 ಎಕರೆ ಪ್ರದೇಶದಲ್ಲಿ ರೈತರು ಕಬ್ಬು ಬೆಳೆಯುತ್ತಿದ್ದಾರೆ. ಪ್ರಸ್ತುತ ರೈತರು ಪ್ರತಿ ಎಕರೆಗೆ 30-35 ಟನ್ ಇಳುವರಿ ಪಡೆಯುತ್ತಿದ್ದು, ರೈತರು ಕಬ್ಬು ನಾಟಿ ಸಂದರ್ಭದಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳನ್ನು ಪಾಲಿಸಿದ್ದಾದರೆ ಪ್ರತಿ ಎಕರೆಯಲ್ಲಿ 100 ಟನ್ ಕಬ್ಬು ಇಳುವರಿ ಪಡೆಯುವುದು ಕಷ್ಟವೇನೂ ಅಲ್ಲ ಎಂದು ಪ್ರಗತಿಪರ ರೈತ ಬಸವರಾಜ ಪಾಟೀಲ್ ಕೊರಳ್ಳಿ ವಿಶ್ವಾಸ ವ್ಯಕ್ತಪಡಿಸಿದರು.
ತಾವು ಈಗಾಗಲೇ ಸರಳ ಹಾಗೂ ಶಿಸ್ತುಬದ್ಧ ಕೃಷಿ ತಂತ್ರಗಳನ್ನು ಅನುಸರಿಸುವ ಮೂಲಕ ಒಂದು ಎಕರೆಯಲ್ಲಿ 162 ಟನ್ ಕಬ್ಬು ಇಳುವರಿ ಪಡೆದಿರುವುದನ್ನು ಆಳಂದ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ರೈತರು ನೋಡಿದ್ದಾರೆ. ಕೆಲವು ಸರಳ ವೈಜ್ಞಾನಿಕ ಹಾಗೂ ಅನ್ವಯಿಕ ತಂತ್ರಗಳನ್ನು ರೈತರು ಅಳವಡಿಸಿಕೊಂಡರೆ ಎಲ್ಲ ರೈತರು ಇಂತಹ ಸಾಧನೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಈ ನಿಟ್ಟಿನಲ್ಲಿ ಆಳಂದ ತಾಲೂಕಿನ ಭೂಸನೂರ ಸಕ್ಕರೆ ಕಾರ್ಖಾನೆ ಸಮೀಪದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಕಳೆದ ಮೇ 8ರಂದು ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 2000ಕ್ಕೂ ಅಧಿಕ ರೈತರಿಗೆ ತರಬೇತಿ ನೀಡಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಷ್ಟಾ ಗ್ರಾಮದ ಕೃಷಿ ಭೂಷಣ ಪ್ರಶಸ್ತಿ ವಿಜೇತ ರೈತ ಡಾ.ಸಂಜೀವ್ ಮಾನೆ ಅವರು ರೈತರಿಗೆ ಅಂದು ಅಗತ್ಯ ಸಲಹೆಗಳನ್ನು ನೀಡಿದ್ದಾರೆ ಎಂದರು.
ಕಬ್ಬು ನಾಟಿಗೂ ಮುನ್ನ ತಪ್ಪದೆ ಮಣ್ಣಿನ ಪರೀಕ್ಷೆ ನಡೆಸಬೇಕು. ಕಬ್ಬಿನ ಬೆಳೆಗೆ ಅಗತ್ಯವಿರುವ ರಸಗೊಬ್ಬರ ಬಳಕೆಯ ಕುರಿತು ರೈತರು ಮಾಹಿತಿ ಹೊಂದಿರಬೇಕು. ಮಣ್ಣಿನ ಆರೋಗ್ಯವೃದ್ಧಿಗೆ ಸ್ಥಳೀಯವಾಗಿ ಕೈಗೆಟುಕುವ ಕ್ರಮಗಳನ್ನು ಅನುಸರಿಸುವುದನ್ನು ರೂಢಿಸಿಕೊಳ್ಳಬೇಕು. ಹನಿ ನೀರಾವರಿ ಪದ್ಧತಿಯ ಮೂಲಕ ಕಬ್ಬು ಇಳುವರಿಗೆ ಮುಂದಾಗಬೇಕು ಹಾಗೂ ಕಬ್ಬಿನಲ್ಲಿ ಕಳೆನಾಶಕವಾಗಿ ಉಪಯೋಗಿಸುವ ಔಷಧಗಳ ಮಾಹಿತಿಯನ್ನು ಅರಿಯುವುದರ ಜೊತೆಗೆ, ಕಬ್ಬಿಗೆ ಸಾಮಾನ್ಯವಾಗಿ ಬಾಧಿಸುವ ಕಾಂಡ ಕೊರಕ ರೋಗ, ಕಾಡಿಗೆ ರೋಗ, ಸುಳಿಬಾಧೆ ರೋಗಗಳ ನಿಯಂತ್ರಣದ ಕುರಿತು ಸರಿಯಾದ ಮಾಹಿತಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಪರಿಹಾರೋಪಾಯ ಕ್ರಮಗಳನ್ನು ಅನುಸರಿಸಿದರೆ ಕಬ್ಬಿನ ಅಧಿಕ ಇಳುವರಿ ಸಾಧ್ಯವಾಗುತ್ತದೆ ಎಂದು ಪಾಟೀಲ್ ಸಲಹೆ ನೀಡಿದರು.
ಪ್ರತಿ ಎಕರೆಯಲ್ಲಿ ಸುಮಾರು 100 ಟನ್ ಇಳುವರಿ ಪಡೆಯುವ ನಿಟ್ಟಿನಲ್ಲಿ ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲು ಆಳಂದ ಪಟ್ಟಣದ ಸಾಯಿಶರಣ ಕೃಷಿ ಕೇಂದ್ರದ ವತಿಯಿಂದ ಗೈಡ್ (ಮಾರ್ಗದರ್ಶಿ) ಪ್ರತಿ ವಾರಕ್ಕೊಮ್ಮೆ ರೈತರ ಹೊಲಗಳಿಗೆ ಭೇಟಿ ಕೊಟ್ಟು ಕಬ್ಬು ವೀಕ್ಷಣೆ ಮಾಡಿ ಅಗತ್ಯ ಸಲಹೆಗಳನ್ನು ನೀಡಲಿದ್ದಾರೆ ಎಂದರು.