
ಬೆಂಗಳೂರು, ನ.೮- ಪ್ರತಿ ಟನ್ ಕಬ್ಬಿಗೆ ೩೩೦೦ ದರವನ್ನು ನೀಡುವ ತೀರ್ಮಾನವನ್ನು ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರೊಂದಿಗೆ ಚರ್ಚಿಸಿ ನಿನ್ನೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಸಕ್ಕರೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತನಾಡಿದ ಅವರು ಅವರೆಲ್ಲರ ಸಮ್ಮುಖದಲ್ಲಿಯೇ ಈ ತೀರ್ಮಾನವಾಗಿದೆ. ಜೂನ್ ನಲ್ಲಿ ಜಿಲ್ಲಾಧಿಕಾರಿಗಳು ಹೇಳುವವರಿಗೆ ೩೨೦೦ ರೂ.ಗಳಿಗೆ ಅವರು ಒಪ್ಪಿರಲಿಲ್ಲ. ನಂತರದಲ್ಲಿ ಒಪ್ಪಿಕೊಂಡರು. ೫೦ ರೂ.ಗಳನ್ನು ಕಾರ್ಖಾನೆ ಮಾಲೀಕರು ಕೊಡಬೇಕೆಂದು ಬಹಳ ಸ್ಪಷ್ಟವಾಗಿ ಹೇಳಲಾಗಿದೆ. ಸರ್ಕಾರ ೫೦ ರೂ. ಪ್ರೋತ್ಸಾಹಧನ ಪಾವತಿಸಲಿದೆ. ೧೦.೨೫ ರಿಕವರಿ ಇದ್ದರೆ ೩೧೦೦ ರೂ.ಜೊತೆಗೆ ೧೦೦ ರೂ.ಗಳು, ಹಾಗೂ ೧೧.೨೫ ರಿಕವರಿ ಇದ್ದರೆ ೩೨೦೦ ಜೊತೆಗೆ ೧೦೦ ರೂ. ಸೇರಿದಂತೆ ಒಟ್ಟು ೩೩೦೦ ಒದಗಿಸಲಾಗುವುದು ಎಂದರು.
ಈ ಸಂಬಂಧ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.
ಸಕ್ಕರೆ ಜವಳಿ ಹಾಗೂ ಸಚಿವ ಶಿವಾನಂದ ಪಾಟೀಲರು ಇಂದು ರೈತರ ಸಮ್ಮುಖದಲ್ಲೇ ಪ್ರತಿ ಟನ್ ಕಬ್ಬಿಗೆ ೩೩೦೦ ನಿಗದಿ ಮಾಡಿರುವ ಬಗ್ಗೆ ಅಲ್ಲಿಯೇ ಘೋಷಣೆ ಮಾಡಲಿದ್ದಾರೆ ಎಂದರು.
ಪ್ರತ್ಯೇಕ ಸಭೆ
ಸರ್ಕಾರ ಬೇರೆ ವಿಚಾರಗಳ ಬಗ್ಗೆ ಪ್ರತ್ಯೇಕ ಸಭೆ ನಡೆಸಲು ತೀರ್ಮಾನಿಸಿದೆ ಎಂದು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದರು.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾಥಿತ್ಯ: ಪರಿಶೀಲನೆ ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ರಾಜಾಥಿತ್ಯ ದೊರಕುತ್ತಿರುವ ಬಗ್ಗೆ ವೀಡಿಯೋ ವೈರಲ್ ಆಗಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.


























