
ಜಮಖಂಡಿ:ಏ.2: ಕಬ್ಬಿನ ಬಾಕಿ ಬಿಲ್ ಪಾವತಿಗಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ರೈತರ ಹೋರಾಟಕ್ಕೆ ತಾಲೂಕು ಆಡಳಿತ ಮಧ್ಯಸ್ಥಿಕೆ ವಹಿಸಿದ ಹಿನ್ನೆಲೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕೃಷ್ಣಾತೀರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಹೋರಾಟದ ಬಳಿಕ ತಾಲೂಕು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ತಹಶಿಲ್ದಾರ ಅನೀಲ ಬಡಗೇರ, ಡಿವೈಎಸ್ಪಿ ಸಯ್ಯದ ರೋಷನ್ ಜಮೀರ್, ಸಿಪಿಐ ಮಲ್ಲಪ್ಪ ಮಡ್ಡಿ ಸೇರಿದಂತೆ ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು ಎಂದು ರೈತ ಮುಖಂಡ ರಾಜು ನದಾಫ ತಿಳಿಸಿದರು.
ನಗರದ ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿಗೆ ಒತ್ತಾಯಿಸಿ ನಡೆದ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ಅವರು, ಜಮಖಂಡಿ ತಾಲೂಕಿನ ವ್ಯಾಪ್ತಿಯ ಮೂರು ಸಕ್ಕರೆ ಕಾರ್ಖಾನೆಗಳಿಂದ ಸುಮಾರು 400 ಕೋಟಿ ರೂಪಾಯಿ ಬಾಕಿ ಉಳಿದಿರುವುದಾಗಿ ತಿಳಿಸಿದರು. ಡಿಸೆಂಬರ್‍ನಿಂದ ಮಾರ್ಚ್ ವರೆಗೆ ಬಾಕಿ ಇರುವ ಈ ಮೊತ್ತವನ್ನು ಹಂತ ಹಂತವಾಗಿ ಪಾವತಿಸುವುದಾಗಿ ಕಾರ್ಖಾನೆಗಳು ಭರವಸೆ ನೀಡಿವೆ ಎಂದರು.
ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಕೈಗೊಳ್ಳಲಾದ ತೀರ್ಮಾನದಂತೆ, ಕಾರ್ಖಾನೆಗಳು ಮುಂದಿನ ಎರಡು ದಿನಗಳಲ್ಲಿ ಪಾವತಿ ಪ್ರಕ್ರಿಯೆ ಪ್ರಾರಂಭಿಸಿ, ಏಪ್ರಿಲ್ ತಿಂಗಳ ಕೊನೆಯೊಳಗೆ ಸಂಪೂರ್ಣ ಬಾಕಿ ಪಾವತಿಸುವುದಾಗಿ ಮಾತು ಕೊಟ್ಟಿವೆ.
ಈ ಹಿನ್ನೆಲೆಯಲ್ಲಿ ರೈತರು ತಾತ್ಕಾಲಿಕವಾಗಿ ಹೋರಾಟವನ್ನು ಹಿಂತೆಗೆದುಕೊಂಡಿದ್ದು, ಏಪ್ರಿಲ್ 10ರವರೆಗೆ ಕಾಯುವುದಾಗಿ ತಿಳಿಸಿದ್ದಾರೆ. ಈ ಅವಧಿಯೊಳಗೆ ಪಾವತಿ ಆಗದಿದ್ದರೆ ಮತ್ತೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತ ಮುಖಂಡ ಪ್ರಸಣ್ಣ ಜಮಖಂಡಿ ಮಾತನಾಡಿ, “ತಾಲೂಕು ಆಡಳಿತದ ಭರವಸೆ ಮೇರೆಗೆ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಸಮಯಕ್ಕೆ ಸರಿಯಾಗಿ ಬಾಕಿ ಪಾವತಿ ಆಗದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುತ್ತಪ್ಪ ಕೋಮರ, ಶ್ರೀಶೈಲ್ ಬುಮಾರ್, ಬಾಹುಬಲಿ ನ್ಯಾಮಗೌಡ, ಸಿದ್ದಪ್ಪ ಬಣಜಿಗ, ಕಲ್ಲಪ್ಪ ಬಿರಾದಾರ್, ಮಲ್ಲಿಕಾರ್ಜುನ ಬೆಕ್ಕೇರಿ, ಪ್ರಶಾಂತ್ ಖರೆ, ಮಹದೇವ್ ಉಪ್ಪಾಲದಿನ್ನಿ, ಕುಮಾರ್ ಬೀಳೂರ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.






















