Home ಜಿಲ್ಲೆ ತುಮಕೂರು ಯಶಸ್ವಿ ಕರು ಪ್ರದರ್ಶನ-ಆರೋಗ್ಯ ಶಿಬಿರ; ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಚಿಕ್ಕನಾಯಕನಹಳ್ಳಿ ಜಿಲ್ಲೆಗೆ ನಂ. ೧

ಯಶಸ್ವಿ ಕರು ಪ್ರದರ್ಶನ-ಆರೋಗ್ಯ ಶಿಬಿರ; ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಚಿಕ್ಕನಾಯಕನಹಳ್ಳಿ ಜಿಲ್ಲೆಗೆ ನಂ. ೧

ಹುಳಿಯಾರು, ಮಾ. ೨೧- ತುಮಕೂರು ಹಾಲು ಒಕ್ಕೂಟದ ವತಿಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಿಶ್ರತಳಿ ರಾಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಕರುಗಳ ಪ್ರದರ್ಶನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ಎಂ.ಶಿವಪ್ರಕಾಶ್ ಬುಳ್ಳೇನಹಳ್ಳಿ ಮಾತನಾಡಿ, ರಾಜ್ಯದ ೧೬ ಹಾಲು ಒಕ್ಕೂಟಗಳಲ್ಲಿ ತುಮಕೂರು ಜಿಲ್ಲೆ ನಾಲ್ಕನೇ ಸ್ಥಾನದಲ್ಲಿದ್ದು, ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಇಡೀ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ ಎಂದರು.
ತಾಲ್ಲೂಕಿನಲ್ಲಿ ಪ್ರತಿದಿನ ಸರಾಸರಿ ೮೬,೮೩೬ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಇದರಿಂದ ದಿನಕ್ಕೆ ಸುಮಾರು ೩೩,೮೮,೯೫೯ ರೂ. ಹೈನುಗಾರರ ಕೈ ಸೇರುತ್ತಿದೆ ಮತ್ತು ತಿಂಗಳಿಗೆ ಸುಮಾರು ೧೦.೫೦ ಕೋಟಿ ರೂ. ಗ್ರಾಮೀಣ ಆರ್ಥಿಕತೆಗೆ ಹರಿದು ಬರುತ್ತಿದೆ. ಇದು ಬೇರೆ ಯಾವುದೇ ಬೆಳೆಯಿಂದ ಸಾಧ್ಯವಿಲ್ಲದ ಸಾಧನೆ ಎಂದು ಅವರು ಅಭಿಪ್ರಾಯಪಟ್ಟರು.


ತಾಲ್ಲೂಕಿನಲ್ಲಿ ಒಟ್ಟು ೧೨೨ ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ೨೫ ಮಹಿಳಾ ಸಂಘಗಳು ಹಾಗೂ ೨೫ ಬಿ.ಎಂ.ಸಿ ಕೇಂದ್ರಗಳಿವೆ. ಸುಮಾರು ೨೬,೪೪೮ ಕುಟುಂಬಗಳು ಹೈನುಗಾರಿಕೆಯನ್ನು ಅವಲಂಬಿಸಿವೆ ಎಂಬ ಮಾಹಿತಿ ನೀಡಿದರು.


ಯಳನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೈ.ಆರ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಹೈನುಗಾರರು ಸಹಕಾರ ಸಂಘಗಳ ಮೇಲೆ ಇಟ್ಟಿರುವ ನಂಬಿಕೆಯೇ ಈ ಕ್ಷೇತ್ರದ ಯಶಸ್ಸಿಗೆ ಕಾರಣವಾಗಿದ್ದು, ಸಂಘಗಳು ಕೇವಲ ಹಾಲು ಸಂಗ್ರಹಣೆಗೆ ಸೀಮಿತವಾಗದೆ ರೈತರಿಗೆ ಸಕಾಲದಲ್ಲಿ ಸೌಲಭ್ಯಗಳನ್ನು ತಲುಪಿಸುವ ಮೂಲಕ ಅವರ ಆರ್ಥಿಕ ಭದ್ರತೆಗೆ ನೆರವಾಗಬೇಕು ಎಂದು ತಿಳಿಸಿದರು.


ಡಾ.ಅಭಿಜ್ಞಾ ಮಾಧುಸ್ವಾಮಿ ಮಾತನಾಡಿ, ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಕಾಯಿಲೆಗಳು ಬಂದ ಮೇಲೆ ಚಿಕಿತ್ಸೆ ಪಡೆಯುವ ಬದಲು ಮುನ್ನೆಚ್ಚರಿಕೆಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಇಂತಹ ಉಚಿತ ತಪಾಸಣಾ ಶಿಬಿರಗಳ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.


ವಿಶೇಷವಾಗಿ ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸಬಾರದು ಹಾಗೂ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಉತ್ತಮ ಎಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಹಾಲು ಒಕ್ಕೂಟದ ಅಧಿಕಾರಿಗಳಾದ ಟಿ.ವಿ.ಶ್ರೀನಿವಾಸ್, ಚಂದ್ರಶೇಖರ್, ಭಾರತಿ ದೇವಿ, ಮಾದಿಹಳ್ಳಿ ಪ್ರಕಾಶ್, ನಂಜೇಗೌಡ ಸೇರಿದಂತೆ ಎಂ.ಪಿ.ಸಿ.ಎಸ್ ಅಧ್ಯಕ್ಷರು, ಕಾರ್ಯದರ್ಶಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ನೂರಾರು ರೈತರು ಭಾಗವಹಿಸಿದ್ದರು.