Home ಜಿಲ್ಲೆ ಕಲಬುರಗಿ ತಡೆಹಿಡಿದ ಪಿಂಚಣಿಗೆ ತಕ್ಷಣ ದಾಖಲೆ ಸಲ್ಲಿಸಿ

ತಡೆಹಿಡಿದ ಪಿಂಚಣಿಗೆ ತಕ್ಷಣ ದಾಖಲೆ ಸಲ್ಲಿಸಿ

ಕಲಬುರಗಿ, ಆ.29:ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ತಡೆಹಿಡಿಯಲಾದ ಪಿಂಚಣಿಯನ್ನು ಮರುಪಡೆಯಲು ಅಗತ್ಯ ದಾಖಲೆಗಳನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ವಯಸ್ಸಿನ ವ್ಯತ್ಯಾಸವಾಗಿದಲ್ಲಿ, ಎಪಿಎಲ್ ಕಾರ್ಡ್ ಹೊಂದಿರುವುದು, ಆದಾಯ ತೆರಿಗೆ ಪಾವತಿಸುತ್ತಿರುವುದು, ಯುಡಿಐಡಿ ಕಾರ್ಡ್ ಇಲ್ಲದಿರುವುದು ಹಾಗೂ ಕುಟುಂಬದ ವಾರ್ಷಿಕ ಆದಾಯ 32,000 ಕ್ಕಿಂತ ಹೆಚ್ಚಿರುವವರ ಪಿಂಚಣಿಯನ್ನು ಸರ್ಕಾರವು ಅನುಮಾನಾಸ್ಪದವೆಂದು ಗುರುತಿಸಿ ತಾತ್ಕಾಲಿಕವಾಗಿ ತಡೆಹಿಡಿದಿದೆ ಎಂದರು.
ಈಗಾಗಲೇ ಸಂಯೋಜನೆ ಮೊಬೈಲ್ ಆ್ಯಪ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ಭೌತಿಕ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ವಿಳಾಸದಲ್ಲಿ ಲಭ್ಯವಿಲ್ಲದ ಹಾಗೂ ಇನ್ನೂ ಪರಿಶೀಲನೆಗೆ ಒಳಪಡದ ಅರ್ಹ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಮುಂದುವರೆಸಲು ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು. ಅರ್ಹರು ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ಬಿಪಿಎಲ್ ಪಡಿತರ ಚೀಟಿ ಹಾಗೂ ಕುಟುಂಬದ ವಾರ್ಷಿಕ ಆದಾಯ 1,20,000 ಕ್ಕಿಂತ ಕಡಿಮೆ ಇರುವ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ಇದರೊಂದಿಗೆ ಅಂಗವಿಕಲ ಪಿಂಚಣಿದಾರರು ಯುಡಿಐಡಿ ಕಾರ್ಡ್ ಹಾಗೂ ನಿರ್ಗತಿಕ ವಿಧವಾ ಪಿಂಚಣಿದಾರರು ಗಂಡನ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರೆ.
ಅರ್ಹ ಫಲಾನುಭವಿಗಳು ಈ ಎಲ್ಲಾ ಅಗತ್ಯ ದಾಖಲೆಗಳನ್ನು ತಮ್ಮ ವ್ಯಾಪ್ತಿಯ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದರೆ ಸ್ಥಗಿತಗೊಂಡಿರುವ ಪಿಂಚಣಿಯನ್ನು ನಿಯಮಾನುಸಾರ ಮರುಚಾಲನೆಗೊಳಿಸಲಾಗುವುದು. ಒಂದು ವೇಳೆ ನಿಗದಿತ ಸೂಕ್ತ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಪಿಂಚಣಿಯನ್ನು ಖಾಯಂ ಆಗಿ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.