Home ಜಿಲ್ಲೆ ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಬಸ್ ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ


ಗುಳೇದಗುಡ್ಡ,ಆ.೬: ಸಮೀಪದ ಹಂಗರಗಿ-ಕಟಗೇರಿ ಗ್ರಾಮದ ಕ್ರಾಸ್‌ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ, ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿ, ಶಾಲಾ ಕಾಲೇಜುಗಳ ಸಮಯಕ್ಕೆ ಬಸ್ ನಿಲುಗಡೆ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.


ಕಟಗೇರಿ ಹಂಗರಗಿ ಕ್ರಾಸ್‌ನ ಮೂಲಕ ನಿತ್ಯವು ನೂರಾರು ವಿದ್ಯಾರ್ಥಿಗಳು ಬಾಗಲಕೋಟೆಗೆ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಆದರೆ ಕಳೇದ ಹಲವು ದಿನಗಳಿಂದ ಈ ಕ್ರಾಸ್‌ನಲ್ಲಿ ಸರಿಯಾಗಿ ಬಸ್ ನಿಲ್ಲಿಸದಿರುವದರಿಂದ ನಮಗೆ ಶಾಲಾ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಕ್ರಾಸನಲ್ಲಿ ಹಂಗರಗಿ, ಕಟಗೇರಿ, ಕೊಂಕಣಕೊಪ್ಪ, ಜಮ್ಮನಕಟ್ಟಿ, ಲಕ್ಕಸಕೊಪ್ಪ, ಹುಲಸಗೇರಿ, ಖಾಜಿಬೂದಿಹಾಳ ಗ್ರಾಮಗಳಿಂದ ನಿತ್ಯವು ನೂರಾರು ವಿದ್ಯಾರ್ಥಿಗಳು ಬಾಗಲಕೋಟೆ, ಬಾದಾಮಿಗೆ ತೆರಳುತ್ತಾರೆ.

ಆದರೆ ಇಲ್ಲಿ ಬಸ್ ನಿಲುಗಡೆಯಾಗದಿರುವದರಿಂದ ಶಾಲಾ ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ. ನಮ್ಮ ಶಿಕ್ಷಣಕ್ಕೆ ಪೆಟ್ಟು ನೀಡಿದಂತಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಬೇಸರ ವ್ಯಕ್ತಪಡಿಸಿದರು.
ಹಂಗರಗಿ ಗ್ರಾಮಕ್ಕೆ ಶಾಲಾ ಕಾಲೇಜುಗಳ ಸಮಯಕ್ಕೆ ಬಸ್ ಓಡಿಸುವುಸುವುದು, ಹೀರೇಬೂದಿಹಾಳ, ಖಾಜಿಬೂದಿಹಾಳ, ಲಕ್ಕಸಕೊಪ್ಪ, ಜಮ್ಮನಕಟ್ಟಿ, ಹುಲಸಗೇರಿ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವುದು, ಹೈದರಾಬಾದ್ ಪುಣೆ, ಇಚಲಕರಂಜಿ, ಮಿರಜ್ ಬಸ್‌ಗಳಿಗೆ ವಿದ್ಯಾರ್ಥಿಗಳ ಪಾಸ್ ನಡೆಸುವುದು, ಬಾಗಲಕೋಟೆ, ಹಂಗರಗಿ ಗುಳೇದಗುಡ್ಡಕ್ಕೆ ಒಂದು ಸರತಿ ಸಂಜೆ ಬಸ್ ಓಡಿಸುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ವಿದ್ಯಾರ್ಥಿಗಳು ಅಧಿಕಾರಿಗಳಿಗೆ ಆಗ್ರಹಿಸಿದರು.