ಧಾರವಾಡ, ಸೆ.೯: ಧಾರವಾಡ ಜಿಲ್ಲೆಯಲ್ಲಿ ಅಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಸೇರಿ ಸುಮಾರು ೯೩,೪೯೬.೯೮ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಜಂಟಿ ಸಮಿತಿ ಮೂಲಕ ಸಮೀಕ್ಷೆ ಮಾಡಿ, ನಿನ್ನೆಯೇ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದತ್ತಾಂಶಗಳನ್ನು ದಾಖಲಿಸಲು ವೆಬ್‌ಸೈಟ್ ಓಪನ್ ಮಾಡಿ, ಪರಿಹಾರ ಬಿಡುಗಡೆಗೆ ತಕ್ಷಣ ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಮುಖ್ಯಮಂತ್ರಿಗಳೊAದಿಗೆ ಧಾರವಾಡ ಜಿಲ್ಲಾಡಳಿತದೊಂದಿಗೆ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, ೨೦೨೫ ರ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಠಿಯಿಂದ ಆದ ಹಾನಿಗಳ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಜರುಗಿದ ವಿಡಿಯೋ ಕಾನ್ಫರೆನ್ಸ್ದಲ್ಲಿ ಮಾತನಾಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಆಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಬೆಳೆ ಹಾನಿ ಮಾಹಿತಿ ದಾಖಲಿಸಲು ವೆಬ್‌ಸೈಟ್ ಓಪನ್ ಮಾಡಿದರೆ, ದತ್ತಾಂಶ ದಾಖಲಿಸುವದನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ತಕ್ಷಣಕ್ಕೆ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಪಿಡಿ ಖಾತೆ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರ ಪಿಡಿ ಖಾತೆಯಲ್ಲಿ ೨೭೧೩.೦೫ ಲಕ್ಷ ರೂ.ಗಳ ಅನುದಾನ ಲಭ್ಯವಿದೆ ಎಂದರು.
ಜನ-ಜಾನುವಾರ ಹಾನಿ: ೨೦೨೫-೨೬ ನೇ ಸಾಲಿನ ಏಪ್ರಿಲ್ ೧ ರಿಂದ ಸೆಪ್ಟೆಂಬರ ೬ ರವರೆಗೆ ಮಾನವ ಹಾನಿಯು ಧಾರವಾಡ ತಾಲೂಕಿನಲ್ಲಿ ೧, ಕುಂದುಗೋಳ-೨, ಹುಬ್ಬಳ್ಳಿ ನಗರ-೧, ಒಟ್ಟು ೪ ಮಾನವ ಹಾನಿಯಾಗಿದ್ದು, ಒಟ್ಟು ೨೦ ಲಕ್ಷ ಪರಿಹಾರ ಹಣ ನೀಡಲಾಗಿದೆ.
ಹುಬ್ಬಳ್ಳಿ ತಾಲೂಕಿನಲ್ಲಿ-೧, ಕಲಘಟಗಿ-೨, ಅಣ್ಣಿಗೇರಿ-೧, ಒಟ್ಟು ೪ ದೊಡ್ಡ ಜಾನುವಾರು ಹಾನಿಯಾಗಿದ್ದು, ೧.೫೦ ಲಕ್ಷ ಪರಿಹಾರ ನೀಡಲಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ ೨ ಸಣ್ಣ ಜಾನುವಾರು ಹಾನಿಯಾಗಿದ್ದು, ೮ ಸಾವಿರ ಪರಿಹಾರ ನೀಡಲಾಗಿದೆ. ಒಟ್ಟಾರೆಯಾಗಿ ದೊಡ್ಡ ಜಾನುವಾರು ಮತ್ತು ಸಣ್ಣ ಜಾನುವಾರು ಹಾನಿಗೆ ೧.೫೮ ಲಕ್ಷ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮುಖ್ಯಮಂತ್ರಿಗಳಿಗೆ ವರದಿ ನೀಡಿದರು.






















