
ಕಲಬುರಗಿ : ಕವಿ, ಸಾಹಿತಿ ಸು.ರಂ.ಎಕ್ಕುಂಡಿಯವರ ಸಾಹಿತ್ಯ ಕೃಷಿ ಮಾನವೀಯತೆಯ ಕೇಂದ್ರಬಿಂದುವಾಗಿದೆ. ಪ್ರಸ್ತುತ ಸಮಾಜಕ್ಕೆ ಎಕ್ಕುಂಡಿಯವರ ಸಾಹಿತ್ಯ ಅವಶ್ಯಕವಾಗಿದೆ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಹೇಳಿದರು. ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿನ ‘ಮುತ್ತಾ ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಸು.ರಂ.ಎಕ್ಕುಂಡಿಯವ 103ನೇ ಜನ್ಮದಿನಾಚರಣೆ’ಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಎಕ್ಕುಂಡಿಯವರು ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ’ ಎಂಬುದು ಅವರ ನಿಲುವು. ತಾವು ಶಿಕ್ಷಕರಾಗುವವರೆಗೆ ನಡೆದು ಬಂದ ಕೆಂಡದ ಮೇಲಿನ ನಡಿಗೆಯೇ ಇವರ ಕಾವ್ಯವನ್ನು ನಿರ್ದೇಶಿಸಿದೆ. ಅನುಯಾಯಿಗಳನ್ನು ನೋಡಿ ನಾವು ಮತದ ಬಗ್ಗೆ ನಿರ್ಣಯ ನೀಡಬಾರದು. ಮತವನ್ನು ನೋಡಿ ಅನುಯಾಯಿಗಳನ್ನು ನಿರ್ಧರಿಸಬೇಕು. ಮನಸ್ಸನ್ನು ವಿಶಾಲಗೊಳಿಸುವ ಎಲ್ಲವನ್ನೂ ಸ್ವೀಕರಿಸಬೇಕು, ಸಂಕುಚಿತಗೊಳಿಸುವುದನ್ನು ಬಿಟ್ಟುಬಿಡಬೇಕು.” ಎಂಬ ನಿಲವು ಸ್ಮರಣೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮುತ್ತಾ, ಶಿಕ್ಷಕ ಆದರ್ಶ ವಡ್ಡನಕೇರಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.























