
ಕೋಲಾರ,ಜ,೮- ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಭಯ ಬೇಡ ಉಳಿದ ೭೦ ದಿನ ಶ್ರದ್ಧೆಯಿಂದ ಓದಿ, ತಂಬಾಕು,ಮಾದಕ ವಸ್ತುಗಳಿಗೆ ಶರಣಾಗದೇ ಪ್ರತಿ ನಿಮಿಷವೂ ಓದಿಗೆ ಮೀಸಲಿಟ್ಟರೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ೨೦೨೫-೨೬ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ಶಾಲೆಯ ವಿದ್ಯಾರ್ಥಿಗಳಿಗೆ ಸಂವಾದ ನಡೆಸಿ ಅವರು ಮಾತನಾಡುತ್ತಿದ್ದರು.
ಉಳಿದಿರುವ ೭೦ ದಿನಗಳಲ್ಲಿ ಪ್ರತಿ ಕ್ಷಣವೂ ಅಮೂಲ್ಯವೆಂದು ತಿಳಿದು ಓದಿಗೆ ಮೀಸಲಿಡಿ ಕಾಲಹರಣ ಮಾಡದಿದ್ದರೆ ಖಂಡಿತಾ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ, ನಮ್ಮ ಪೋಷಕರು ಸರಿಯಿಲ್ಲ ಎಂದೆಲ್ಲಾ ಚಿಂತೆ ಮಾಡದೇ ಸಾಧನೆಯ ಗುರಿಯತ್ತ ಹೆಜ್ಜೆ ಹಾಕಿ ಎಂದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ, ಆತ್ಮಸ್ಥೈರ್ಯ ಹಾಗೂ ಸಂಭ್ರಮದಿಂದ ಪರೀಕ್ಷೆ ಎದುರಿಸಲು ಸಿದ್ದರಾಗಿ, ಪಠ್ಯಕ್ರಮ ಪೂರ್ಣಗೊಂಡಿರುವುದನ್ನು ಖಾತ್ರಿ ಮಾಡಿಕೊಂಡು ನೈಜ ಗುರಿ ಸಾಧನೆಗೆ ಓದು ಮುಂದುವರೆಸಿ ಎಂದರು.
ಆರೋಗ್ಯ ರಕ್ಷಣೆ ಅತಿ ಮುಖ್ಯವಾಗಿದೆ, ನಿದ್ದೆ ಮಾಡುವ ಸಮಯದಲ್ಲಿ ನಿದ್ದೆ ಮಾಡಿ ನಂತರದ ಅವಧಿಯಲ್ಲಿ ಮೊಬೈಲ್, ಟಿವಿ, ಆಟೋಟ ಎಲ್ಲವನ್ನು ಪರೀಕ್ಷೆ ಮುಗಿಯುವರೆಗೂ ತ್ಯಾಗ ಮಾಡಿ ಎಂದು ಕಿವಿಮಾತು ಹೇಳಿದರು.
ಪಠ್ಯಪುಸ್ತಕ ಓದಿ, ನೀವು ಶೇ.೧೦೦ ಸಾಧನೆಯ ಗುರಿ ಸಾಧಿಸಲು ಅನ್ವಯಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಶಕ್ತಿ ಪಡೆಯಬೇಕು, ಪಠ್ಯದಲ್ಲಿನ ಯಾವುದೇ ಪ್ರಶ್ನೆಗೆ ನಾನು ಉತ್ತರಿಸಬಲ್ಲೇ ಎಂಬ ದೃಢವಿಶ್ವಾಸ ಮೂಡುವ ರೀತಿಯಲ್ಲಿ ನಿಮ್ಮ ಓದು ಇರಬೇಕು ಈಗಾಗಲೇ ಇಲಾಖೆಯಿಂದ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮಾದರಿ ಪ್ರಶ್ನೆಪತ್ರಿಕೆ ನೀಡಲಾಗಿದೆ, ಅನುಮಾನಗಳಿದ್ದರೆ ನಿಮ್ಮ ಶಿಕ್ಷಕರೊಂದಿಗೆ ಮಾತನಾಡಿ ಪರಿಹರಿಸಿಕೊಳ್ಳಿ ಎಂದರು.
ಎಸ್ಸೆಸ್ಸೆಲ್ಸಿ ಜೀವನದ ಮೊದಲ ಪಬ್ಲಿಕ್ ಪರೀಕ್ಷೆಯಾಗಿದೆ, ಇದರಿಂದ ನಿಮ್ಮಲ್ಲಿ ಭಯ ಸಹಜ ಆದರೆ ನೀವು ಕಲಿಕೆಯಲ್ಲಿ ದೃಢತೆ ಸಾಧಿಸಿದರೆ ನೀವು ಹೆದರುವ ಅಗತ್ಯವೇ ಇಲ್ಲ, ಅದಕ್ಕಾಗಿಯೇ ಪೂರ್ವ ಸಿದ್ದತಾ ಪರೀಕ್ಷೆಗಳನ್ನು ನಡೆಸುವ ಮೂಲಕ ನಿಮ್ಮಲ್ಲಿ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ತಾಹೇರಾನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ವೆಂಕಟರೆಡ್ಡಿ, ಭವಾನಿ, ಸುಗುಣಾ, ಶ್ವೇತಾ, ರಮಾದೇವಿ, ಚೈತ್ರಾ, ಶ್ರೀನಿವಾಸಲು ಹಾಜರಿದ್ದರು.




























