ಚಿಕ್ಕ ತಿರುಪತಿಯಲ್ಲಿ ಡಿ,೨೩ ದಸಂಸ ಪದಾಧಿಕಾರಿಗಳ ಅಧ್ಯಯನ ಶಿಬಿರ

ಕೋಲಾರ,ಡಿ.೨೦- ದಲಿತ ಚಳುವಳಿಯ ಪದಾಧಿಕಾರಿಗಳಲ್ಲಿ ವೈಚಾರಿಕತೆ ಹಾಗೂ ಶಿಸ್ತು ಬೆಳೆಸಿಕೊಳ್ಳಲು ಡಿ೨೩ರ ಮಂಗಳವಾರದಿಂದ ಚಿಕ್ಕ ತಿರುಪತಿಯಲ್ಲಿ ಎರಡು ದಿನಗಳ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ವಿಭಾಗೀಯ ಸಂಚಾಲಕ ಮಣಿಪಾಲ್ ರಾಜಪ್ಪ ತಿಳಿಸಿದರು.


ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ದಲಿತ ಚಳುವಳಿ ತಮ್ಮ ಕಾರ್ಯಕರ್ತರ ಬೌದ್ಧಿಕ ಸಾಮರ್ಥ್ಯ ಮತ್ತು ಶಿಸ್ತು ಬೆಳೆಸುವ ನಿಟ್ಟಿನಲ್ಲಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಅಧ್ಯಯನ ಶಿಬಿರ, ಕಾರ್ಯಾಗಾರ, ಕಮ್ಮಟ, ಕಲಾವಿದರ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದು ಸಂಘಟನೆ ಚಲನೆಯ ಒಂದು ಭಾಗವಾಗಿದೆ ಎಂದು ಹೇಳಿದರು.


ಸಾಮಾಜಿಕ ಸುಧಾರಣೆಗಾಗಿ ಜನ್ಮತಾಳಿದ ದಲಿತ ಚಳುವಳಿ, ಶೋಷಿತ ಸಮುದಾಯಗಳ ಮೇಲೆ ನಡೆಯುವ ನಿರಂತರ ದೌರ್ಜನ್ಯಗಳು, ಶೋಷಣೆಗಳು, ದಬ್ಬಾಳಿಕೆಗಳ ವಿರುದ್ಧ ಹೋರಾಟಗಳಿಗೆ ಸಜ್ಜುಗೊಳಿಸುವ ಮೊದಲು ಚಳುವಳಿಯ ಮುಂಚೂಣಿ ನಾಯಕರಿಗೆ ಕಾನೂನು ಅರಿವು, ನೈತಿಕ ಮೌಲ್ಯಗಳನ್ನು ಅಧ್ಯಯನ ಶಿಬಿರ ಹಾಗೂ ಕಾರ್ಯಾಗರಗಳ ಮೂಲಕ ತಿಳಿಸಿಕೊಡುವ ಪ್ರಕ್ರಿಯೆ ಪ್ರಾರಂಭದಿಂದಲೂ ಮೈಗೂಡಿಸಿಕೊಂಡು ಬಂದಿದೆ ಎಂದರು


ಈ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ ೨೩ ಹಾಗೂ ೨೪ ರಂದು ಚಿಕ್ಕ ತಿರುಪತಿಯ ಶುಭಮೇರು ಕಲ್ಯಾಣ ಮಂಟಪದಲ್ಲಿ ಪದಾಧಿಕಾರಿಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ, ಈ ಶಿಬಿರದಲ್ಲಿ ಬೆಂಗಳೂರು ವಿಭಾಗೀಯ ವ್ಯಾಪ್ತಿಗೆ ಬರುವ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಹಂತದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು.


ಅಧ್ಯಯನ ಶಿಬಿರವನ್ನು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಇಂದಿರಾ ಕೃಷ್ಣಪ್ಪ, ಟಿ.ಆರ್.ಸ್ವಾಮಿ ಆಗಮಿಸಲಿದ್ದಾರೆ. ಒಟ್ಟು ನಾಲ್ಕು ಗೋಷ್ಠಿಗಳು ನಡೆಯಲಿವೆ, ಮೊದಲ ಗೋಷ್ಠಿ ದಸಂಸ ಹೋರಾಟದ ಹೆಜ್ಜೆಗಳು, ಪತ್ರಕರ್ತ ಶಿವಾಜಿ ಗಣೇಶನ್ ವಿಷಯ ಮಂಡನೆ ಮಾಡಲಿದ್ದಾರೆ. ಎರಡನೇ ಗೋಷ್ಠಿ, ಅಂಬೇಡ್ಕರ್ ಚಳುವಳಿಯಲ್ಲಿ ಮಹಿಳೆಯರ ಪಾತ್ರ, ಪತ್ರಕರ್ತೆ ಹುಲಿಕುಂಟೆ ಮಂಜುಳ ವಿಷಯ ಮಂಡನೆ ಮಾಡಲಿದ್ದಾರೆ. ಮೂರನೇ ಗೋಷ್ಠಿ, ಉದ್ಯಮ ಶೀಲತೆ ಮತ್ತು ದಲಿತರು, ಸಾಮಾಜಿಕ ಚಿಂತಕ ಶ್ರೀಪಾದ ಭಟ್ ವಿಚಾರ ಮಂಡನೆ ಮಾಡಿದರೆ, ನಾಲ್ಕನೇ ಗೋಷ್ಠಿ, ಭವಿಷ್ಯದ ಹಾದಿ ಮನುವಾದ ಮತ್ತು ಅಂಬೇಡ್ಕರ್ ವಾದ – ಕ್ರಾಂತಿ ಪ್ರತಿ ಕ್ರಾಂತಿ ಹಿನ್ನೆಲೆಯಲ್ಲಿ ಡಾ.ಸಿ.ಜಿ.ಲಕ್ಷ್ಮೀಪತಿ ವಿಷಯ ಮಂಡನೆ ಮಾಡಲಿದ್ದಾರೆ. ಕವಿ ಸುಬ್ಬು ಹೊಲೆಯರ್ ಅನುಭವ ಕಥನಗಳನ್ನು ನಡೆಸಿಕೊಡಲಿದ್ದಾರೆ. ಮಾಲೂರು ಶಾಸಕ ಕೆವೈ ನಂಜೇಗೌಡ ಸಮಾರೋಪ ಭಾಷಣ ಮಾಡುವರು ಎಂದು ವಿವರಿಸಿದರು.


ಮೊದಲ ದಿನ ಸಂಜೆ ೬ ಗಂಟೆ ನಂತರ ದಲಿತ ಕಲಾ ಮಂಡಳಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.


ರಾಜ್ಯ ಸಂಘಟನಾ ಸಂಚಾಲಕ ಎ.ಪಿ.ಎಲ್. ರಂಗನಾಥ್, ಜಿಲ್ಲಾ ಪ್ರಧಾನ ಸಂಚಾಲಕ ಬಿ.ಶ್ರೀರಂಗ ಮಾತನಾಡಿದರು.


ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎ.ಕೆ.ವೆಂಕಟೇಶ್, ಸಹಕಾರ ಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ, ಮಾಲೂರು ಮುನಿರಾಜು, ಕುಮಾರ್ ಉಪಸ್ಥಿತರಿದ್ದರು.