ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು : ಶಾಸಕ ಚನ್ನಾರೆಡ್ಡಿ ಪಾಟೀಲ

ಯಾದಗಿರಿ :ಅ.೨೬:ಪಠ್ಯದಷ್ಟೇ ಮಹತ್ವ ಕ್ರೀಡೆಗೂ ಇದ್ದು, ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಸಾಧನೆ ಮೆರೆಯಬೇಕೆಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಆಟಗಳಲ್ಲಿ ಸೋಲು,ಗೆಲುವು ಮುಖ್ಯವಲ್ಲ, ಸೋಲೇ ಗೆಲುವಿನ ಮೆಟ್ಟಿಲು ಅಂದು ಕೊಂಡು ಸ್ಪರ್ಧಾಮನೋಭಾವನೆಯಿಂದ ಆಟಗಳನ್ನು ಆಡಬೇಕೆಂದರು. ಒಂದು ಕಾಲದಲ್ಲಿ ಕ್ರೀಡೆಗೆ ಅಷ್ಟು ಮಹತ್ವ ಇರಲಿಲ್ಲ, ಈಗ ಸರ್ಕಾರಗಳು ಸಾಕಷ್ಟು ಅನುದಾನ ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.ಕಾರಣ ವಿದ್ಯಾರ್ಥಿಗಳು ಹೆಚ್ಚು,ಹೆಚ್ಚು ಆಟಗಳಲ್ಲಿ ಭಾಗವಹಿಸಬೇಕೆಂದು ಶಾಸಕರು ಹೇಳಿದರು. ದೇಶಿ ಆಟಗಳಿಗೂ ಈಗ ಮಹತ್ವ ಬಂದಿದ್ದು, ಇಲ್ಲಿನ ಮಕ್ಕಳು ಸತತ ಪ್ರಯತ್ನ ಮಾಡಿ ರಾಜ್ಯ,ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಗಿರಿಜಿಲ್ಲೆ ಮಕ್ಕಳು ಕೀರ್ತಿ ತರಬೇಕೆಂದರು. ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್ ಜಿಲ್ಲಾ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಸೇರಿದಂತೆಯೇ ಇತರರಿದ್ದರು. ಕಬಡ್ಡಿ, ಯೋಗಾಸನ, ವಾಲಿಬಾಲ್ ,ರನ್ನಿಂಗ್ ಸೇರಿದಂತೆಯೇ ಒಟ್ಟು ಏಳು ಆಟಗಳ ಸ್ಪರ್ಧೆಗಳು ನಡೆದವು. ೫೦೦ ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ೩೨ ದೈಹಿಕ ಶಿಕ್ಷಕರು ಮತ್ತು ಕ್ರೀಡಾ ಇಲಾಖೆ ಸಿಬ್ಬಂದಿ ಇದ್ದರು.