ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು’: ಸೌಂದರ್ಯ ಸೆಂಟ್ರಲ್ ಶಾಲಾ ವಾರ್ಷಿಕೋತ್ಸವದಲ್ಲಿ ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಕಿವಿಮಾತು

ಬೆಂಗಳೂರು, ಡಿಸೆಂಬರ್ ೮: ಸೌಂದರ್ಯ ಸೆಂಟ್ರಲ್ ಶಾಲೆಯು ತನ್ನ ವಾರ್ಷಿಕೋತ್ಸವವನ್ನು ಪ್ರಿಪರೇಟರಿ, ಫೌಂಡೇಶನಲ್ ಮತ್ತು ಪ್ರಧಾನ ವಾರ್ಷಿಕೋತ್ಸವ ಎಂಬ ಮೂರು ವಿಭಾಗಗಳಲ್ಲಿ, ವಿಭಿನ್ನ ಪರಿಕಲ್ಪನೆಗಳೊಂದಿಗೆ ಅದ್ಧೂರಿಯಿಂದ ಆಚರಿಸಿತು.


’ಮಾನವಕುಲದ ಪುರಾತನ ಕಾಲದಿಂದ ಭವಿಷ್ಯದ ಆವಿಷ್ಕಾರಗಳ ಲೋಕದವರೆಗೆ’, ’ದೊಡ್ಡ ಕನಸುಗಳನ್ನು ಕಾಣಿರಿ’ ಮತ್ತು ’ಜೀವನದ ಲಯ’ ಸೇರಿದಂತೆ ಹಲವು ಆಕರ್ಷಕ ಥೀಮ್‌ಗಳಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಪಲೋಕಾಯುಕ್ತ ಹಾಗೂ ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ಕೊರಟಗೆರೆ ನರಸಿಂಹಮೂರ್ತಿ ಫಣೀಂದ್ರ, ಡಿಎಚ್‌ಇಇ ಆಸ್ಪತ್ರೆಯ ಶಿಶು ತಜ್ಞೆ ಡಾ. ಸುಪ್ರಜಾ ಚಂದ್ರಶೇಖರ್, ಮತ್ತು ಸೌಂದರ್ಯ ತಜ್ಞೆ ಶಾಲು ಚಾವ್ಲಾ ಭಾಗವಹಿಸಿದ್ದರು.

ಉಪಲೋಕಾಯುಕ್ತ ಶ್ರೀ ಕೆ.ಎನ್.ಫಣೀಂದ್ರ ಅವರು ಮಾತನಾಡಿ “ಬಾಲ್ಯದ ಜೀವನದ ಸಮಯ ಮತ್ತೆ ಮರಳಿ ಬರುವುದಿಲ್ಲ. ಈ ದಿನಗಳಲ್ಲಿ ಕಲಿತ ವಿದ್ಯೆಗಳು ಎಂದಿಗೂ ಮರೆಯುವುದಿಲ್ಲ. ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು. ಪಾಲಕರು ವಿದ್ಯಾರ್ಥಿಗಳ ಕನಸುಗಳಿಗೆ ಪ್ರೋತ್ಸಾಹ ನೀಡಬೇಕು. ಶಾಲೆಗಳಲ್ಲಿ ಪಠ್ಯಕ್ರಮದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ಅವರು ಒತ್ತಿ ಹೇಳಿದರು.

ಶಿಶು ತಜ್ಞೆ, ಡಾ. ಸುಪ್ರಜಾ ಚಂದ್ರಶೇಖರ್ ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಆಹಾರ ಪದ್ಧತಿಯ ಪಾತ್ರವನ್ನು ವಿವರಿಸಿದರು. “ಆರೋಗ್ಯಕರ ಆಹಾರ ಪದ್ಧತಿಗಳು ಮಕ್ಕಳ ದೈಹಿಕ ಬೆಳವಣಿಗೆ, ತೀಕ್ಷ್ಣ ಕಲಿಕೆ ಸಾಮರ್ಥ್ಯ ಹಾಗೂ ಭಾವನಾತ್ಮಕ ಸಮತೋಲನಕ್ಕೆ ಆಧಾರವಾಗಿವೆ,” ಎಂದು ಅವರು ಒತ್ತಿ ಹೇಳಿ, ಶಾಲೆಯ ಸಮಗ್ರ ಅಭಿವೃದ್ಧಿಯ ಬದ್ಧತೆಯನ್ನು ಮೆಚ್ಚಿದರು.

ಸೆಂಟ್ರಲ್ ಶಾಲೆಯ ಸಿಇಒ ಕೀರ್ತನ್ ಕುಮಾರ್ ಮಾತನಾಡಿ, “ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿದ್ದೇವೆ. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸುತ್ತಿರುವುದು ಸಂತಸದ ವಿಚಾರ,” ಎಂದು ಹರ್ಷ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಕಲ್ಪನೆ, ಆತ್ಮವಿಶ್ವಾಸ ಮತ್ತು ಪ್ರತಿಭೆಯನ್ನು ಬಿಂಬಿಸುವ ಬಣ್ಣಬಣ್ಣದ ಅಲಂಕಾರಗಳು ಹಾಗೂ ಆಕರ್ಷಕ ವೇಷಭೂಷಣಗಳ ಪ್ರದರ್ಶನಗಳು ಪೋಷಕರಿಗೆ ಸಂತೋಷ ನೀಡಿದವು.