
ಕಲಬುರಗಿ,ಮೇ.20-ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತಮ್ಮ ಜೀವನದ ಗುರಿಯಾಗಿಸಿಕೊಳ್ಳಬೇಕು ಎಂದು ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ರವೀಂದ್ರ ಕುಂಬಾರ ಹೇಳಿದರು.
ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಏಸಿ ಮತ್ತು ಕನ್ನಡ ವಿಭಾಗದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರವನ್ನು ಉದ್ದೇಶಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಎಂಬ ವಿಷಯದ ಕುರಿತು ಮಾತನಾಡಿದ ಅವರು, ಕೆಪಿಎಸ್ಸಿ ಮತ್ತು ಕೆಎಇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಮಹತ್ವದ ವಿಷಯವಾಗಿದೆ ಎಂದರು.
ಕೆಎಎಸ್ ಪರೀಕ್ಷೆಯಲ್ಲಿ 150 ಅಂಕಗಳ ಕಡ್ಡಾಯ. ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳು ಪಾಸಾದರೆ ಮಾತ್ರ ಅಭ್ಯರ್ಥಿಯ ಉಳಿದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಕನ್ನಡ ಕಡ್ಡಾಯ ಪತ್ರಿಕೆ ಅಷ್ಟೇ ಅಲ್ಲ ,ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿಯೂ ಕೂಡ ಕನ್ನಡ ಸಾಹಿತ್ಯ ಮತ್ತು ಭಾಷೆಯ ಪ್ರಶ್ನೆಗಳಿರುತ್ತವೆ. ಕರ್ನಾಟಕ ಸರ್ಕಾರದಿಂದ ನೇಮಕಾತಿ ಗೊಳ್ಳುವ ಎಲ್ಲಾ ಹುದ್ದೆಗಳಿಗೂ ಕನ್ನಡ ಕಡ್ಡಾಯವಾಗಿರುತ್ತದೆ. ಬ್ಯಾಂಕಿನ ನೇಮಕಾತಿಯಲ್ಲಿಯೂ ಕೂಡ ಕನ್ನಡ ಕಡ್ಡಾಯವಾಗಿದೆ. ಸರಕಾರಿ ಹುದ್ದೆಗೆ ನೇಮಕಗೊಳ್ಳುವ ಅಭ್ಯರ್ಥಿಗೆ ಮೂಲ ಕನ್ನಡ ಜ್ಞಾನ ಇದೆಯೋ ಇಲ್ಲವೋ ಎಂಬುದು ಕಡ್ಡಾಯವಾಗಿ ಪರೀಕ್ಷಿಸಲಾಗುತ್ತದೆ. ಬಹು ಆಯ್ಕೆಯ ವಸ್ತುನಿಷ್ಠ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕನ್ನಡ ಬರವಣಿಗೆಯ ಭಾಷಾ ದೋಷದ ಪರೀಕ್ಷೆ ನಡೆಯುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡದ ಜ್ಞಾನವನ್ನು ಹೊಂದಿರಬೇಕು. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಿದೆ. ಕೇವಲ ಬಿಎಎಂಎ ಅಥವಾ ಇನ್ಯಾವುದೇ ಕೋರ್ಸಿನ ಅಂಕಗಳ ಆಧಾರದ ಮೇಲೆ ನೇಮಕತಿ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಗುರಿಯಾಗಿಸಿಕೊಳ್ಳಬೇಕೆಂದು ನುಡಿದರು.
ಸಂಯೋಜನಾಧಿಕಾರಿಗಳಾದ ಐಕ್ಯೂಏಸಿ ಸಂಯೋಜನಾಧಿಕಾರಿಗಳಾದ ಡಾ.ಶರಣಬಸಪ್ಪ ಅವರು ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಂಶುಪಾಲರಾದ ಡಾ.ಪ್ರಕಾಶ ಮೊರ್ಗೆ ಅವರು ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಅತ್ಯಂತ ಮಹತ್ವದ ವಿಷಯವಾಗಿದೆ .ಕನ್ನಡ ಕಠಿಣ ವಿಷಯವೆಂದು ಕಾಣಿಸಿಕೊಂಡರೂ ಸಹ ಅದರ ಅಧ್ಯಯನ ಮಾಡಿದಂತೆಲ್ಲ ಅದೊಂದು ಸರಳ ವಿಷಯವಾಗಿ ಮಾರ್ಪಡುತ್ತದೆ ಎಂದು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಮಹಾದೇವ ಬಡಿಗೇರ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕರಾದ ಸಿದ್ರಾಮಪ್ಪ ಬಣಗಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರು .ಕನ್ನಡ ಪ್ರಾಧ್ಯಾಪಕರಾದ ಡಾ.ಅನ್ನಪೂರ್ಣ ಪಾಟೀಲ ,ಡಾ. ಪ್ರಿಯದರ್ಶಿನಿ, ಡಾ.ಸುವರ್ಣ ಹಿರೇಮಠ್, ಡಾ.ಆನಂದ ಬಿರಾದರ, ಡಾ.ವಿದ್ಯಾವತಿ ಪಾಟೀಲ್ ಉಪಸ್ಥಿತರಿದ್ದರು.