ಬೆಳ್ಳಂಬೆಳಿಗ್ಗೆ ಬಸ್ ಘಟಕಕ್ಕೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಔರಾದ್ :ಡಿ.11: ಬೆಳಗಿನ ಮೈ ಕೊರೆಯುವ ಚಳಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ಘಟಕಕ್ಕೆ ಬೆಳಗಿನ ಜಾವ 6 ಗಂಟೆಗೆ ಆಗಮಿಸಿದ ವಿದ್ಯಾರ್ಥಿಗಳು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ, ಶಾಲಾ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಮಕ್ಕಳು ತರಗತಿಗಳಿಂದ ವಂಚಿತರಾಗುತ್ತಿದ್ದಾರೆ, ತಾಲೂಕಿನ ಬಹುತೇಕ ಬಸ್ ವ್ಯವಸ್ಥೆ ಇಲ್ಲದೆ ಮಕ್ಕಳು ಕಾಲ್ನಡಿಗೆಯಲ್ಲಿ ಬರುತ್ತಾರೆ, ಬಂದರು ಸಹ ಸರಿಯಾದ ಸಮಯಕ್ಕೆ ಬಸ್ ಸಿಗುವುದಿಲ್ಲ, ವಿದ್ಯಾಭ್ಯಾಸ ಮಾಡಿ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿಗಳು ಬಸ್ ಸಂಚಾರದಲ್ಲಿಯೇ ಕಾಲ ಕಳೆಯುವಂತಾಗಿದೆ. ಶಾಲಾ ಕಾಲೇಜಿನ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಸಮಯ ಪಾಲನೆ ಮಾಡದೆ ಸಾರಿಗೆ ಅಧಿಕಾರಿಗಳು ಮಕ್ಕಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಪರಿಷತ್ ಮುಖಂಡ ಶಿವಶರಣ ಚಾಂಬೋಳೆ ಅವರು ಮಾತನಾಡಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ, ಇದರಿಂದ ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬೀಳುತ್ತಿದೆ ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿದರೆ ರಾಜ್ಯವ್ಯಾಪಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ ಅವರು ಮಾತನಾಡಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಯಾರು ಕೂಡ ಸಮಯ ಪಾಲನೆ ಮಾಡುತ್ತಿಲ್ಲ ನಿಗದಿತ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಆಗದೆ ವಿದ್ಯಾರ್ಥಿಗಳು ದಿನನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಔರಾದ-ಬೀದರ ಹೋಗುವ ವಿದ್ಯಾರ್ಥಿಗಳು ದಿನನಿತ್ಯ ತೊಂದರೆ ಅನುಭವಿಸುವಂತಾಗಿದೆ, ಕೂಡಲೇ ಅಧಿಕಾರಿಗಳು ವ್ಯವಸ್ಥೆ ಸರಿಪಡಿಸಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ವಿಭಾಗೀಯ ರಾಜೇಂದ್ರ ಜಾಧವ ವಿದ್ಯಾರ್ಥಿಗಳ ಮನವಲಿಸಿ ಒಂದು ವಾರದ ಒಳಗೆ ವ್ಯವಸ್ಥೆ ಸರಿಪಡಿಸಲಾಗುವುದು ಎಂದು ಮನವಿ ಮಾಡಿದರು. ಪಿಎಸ್‍ಐ ವಸೀಂ ಪಟೇಲ ಅವರು ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದರು.

ಈ ಸಂಧರ್ಭದಲ್ಲಿ ಮಂಜುನಾಥ, ಅಂಬಾದಾಸ ನಳಗೆ, ಮಲ್ಲಿಕಾರ್ಜುನ ಟೆಕರಾಜ, ಅನಿಲ ಮೇತ್ರೆ, ಮಹಾದೇವ ಶಿಂಧೆ, ಶ್ರೀಕಾಂತ ಎಡವೆ, ನಿತೀನ ಮೂಲಗೆ, ಪ್ರಶಾಂತ ಮೇತ್ರೆ, ಮಾರುತಿ ಉದಗಿರೆ, ಪ್ರೇಮ, ಅಜಯ ಸೇರಿದಂತೆ ಅನೇಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ವಿದ್ಯಾರ್ಥಿಗಳ ಬೇಡಿಕೆಗಳು

ಔರಾದ-ಬೀದರ್ ಮಾರ್ಗಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆ ಹಾಗೂ ಸಾಯಂಕಾಲ ಬರಲು ಬಸ್ ವ್ಯವಸ್ಥೆ ಮಾಡಬೇಕು.
ಔರಾದ-ಬೀದರ ಮಾರ್ಗದಲ್ಲಿ ಸಂಚರಿಸುವ ಎಲ್ಲ ತಡೆರಹಿತ - ತಡೆಸಹಿತ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸ್ ಅನುಮತಿ ನೀಡಬೇಕು.
ಲಿಂಗಿ, ಬಸನಾಳ, ಸಂಗನಾಳ, ಮುಧೋಳ(ಕೆ), ಭೋಪಳಗಾಂವ ಗ್ರಾಮಗಳಿಗೆ ಹೊಸ ಬಸ್ ನೀಡಬೇಕು.
ಯನಗುಂದಾ, ಭವಾನಿಬಿಜಲಗಾಂವ, ಮುಕ್ರಂಬಾದ, ಡೋಣಗಾಂವ ಬಸ್ ಸಂಚಾರ ನಿಗದಿತ ಸಮಯಕ್ಕೆ ಆಗಬೇಕು.
ಗಣೇಶಪೂರ(ಯು) ಗ್ರಾಮದ ವಿದ್ಯಾರ್ಥಿಗಳು 4 ಕಿಲೋಮೀಟರ್ ನಡೆದುಕೊಂಡು ಬರುತ್ತಾರೆ ಅಲ್ಲಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು.