
ಬೀದರ್ :ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯ ವಿದ್ಯಾರ್ಥಿಗಳು ದಿನಾಂಕ 30/09/2026 ರಂದು ಕಲಬುರಗಿಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ – ಸಿ.ಎಂ. ಕಪ್ 2026ರ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಒಟ್ಟು 10 ಪದಕಗಳನ್ನು ಪಡೆದು ಬೀದರ್ ಜಿಲ್ಲೆಗೆ ಗೌರವ ಮತ್ತು ಹೆಮ್ಮೆ ತಂದಿದ್ದಾರೆ.
ಅಕಾಡೆಮಿಯ ವಿದ್ಯಾರ್ಥಿಗಳಾದ ವೀರೇಶ್, ಶ್ರೇಷ್ಠ, ದೀಕ್ಷಾ ಮತ್ತು ಅನ್ವಿ ಚೌದ್ರಿ ಅವರು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸಮರ್ಥ್ ಖುಬಾ, ಬಸವಶ್ರೀ ಮತ್ತು ಅವಿಷ್ಕಾ ಅವರು ಬೆಳ್ಳಿ ಪದಕಗಳನ್ನು ಪಡೆದಿದ್ದು, ರೋಶ್ನಿ, ಆದಿತಿ ಮತ್ತು ಪ್ರಣವ್ ಪಾಟೀಲ್ ಅವರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಅಕಾಡೆಮಿಯಿಂದ ಒಟ್ಟು 17 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಎಲ್ಲರೂ ತಮ್ಮ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ.
ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಗ್ಲೋಬಲ್ ಸೈನಿಕ್ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದು ಒಟ್ಟು 10 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧನೆಯೊಂದಿಗೆ ಅವರು ಮುಂದಿನ ರಾಜ್ಯಮಟ್ಟದ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅಲ್ಲದೆ, ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿಯೂ ನಮ್ಮ ಅಕಾಡೆಮಿಯ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಅಕಾಡೆಮಿಗೆ ಹೆಮ್ಮೆಯ ಸಂಗತಿಯಾಗಿದೆ.
ವಿಜೇತ ವಿದ್ಯಾರ್ಥಿಗಳಿಗೆ ಅಕಾಡೆಮಿಯ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕನ್ಪುರೆ ಅವರು ಅದ್ದೂರಿಯಾಗಿ ಸ್ವಾಗತಿಸಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹಾಗೂ ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಗೆ ಅವರು ತಂದ ಗೌರವವನ್ನು ಪ್ರಶಂಸಿಸಿದರು. ಹಲವಾರು ಜಿಲ್ಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ವಿಜೇತರಾಗಿರುವ ವಿದ್ಯಾರ್ಥಿಗಳು ಮುಂದಿನ ರಾಜ್ಯಮಟ್ಟದ ಸ್ಪರ್ಧೆಗೆ ಸಿದ್ಧರಾಗಿದ್ದಾರೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಮಕ್ಕಳಲ್ಲಿರುವ ಶೂಟಿಂಗ್ ಪ್ರತಿಭೆಯನ್ನು ಗುರುತಿಸಿ, ಅವರು ಶೂಟಿಂಗ್ ಕ್ಷೇತ್ರದಲ್ಲಿ ಮತ್ತಷ್ಟು ಮುಂದುವರಿಯಬೇಕು ಎಂಬ ಕನಸಿನಿಂದ ಅಧ್ಯಕ್ಷರಾದ ಕರ್ನಲ್ ಶರಣಪ್ಪ ಸಿಕನ್ಪುರೆ ಅವರು ಅಕಾಡೆಮಿಯಲ್ಲಿ ಶೂಟಿಂಗ್ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದಾರೆ. ನುರಿತ ತರಬೇತುದಾರ ಹಾಗೂ ಉತ್ತಮ ಗುರಿಗಾರರಾದ ಕ್ಯಾಪ್ಟನ್ ಟಿ.ಸಿ. ಪಳಂಗಪ್ಪ ಅವರಿಂದ ವಿದ್ಯಾರ್ಥಿಗಳಿಗೆ ಸತತ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ ಗ್ಲೋಬಲ್ ಸೈನಿಕ್ ಅಕಾಡೆಮಿಯ ವಿದ್ಯಾರ್ಥಿಗಳು ಶೂಟಿಂಗ್ ಕ್ಷೇತ್ರದಲ್ಲಿ ಸತತವಾಗಿ ಜಯ ಸಾಧಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಪಾಲಕರು, “ಕರ್ನಲ್ ಶರಣಪ್ಪ ಸಿಕನ್ಪುರೆ ಅವರ ಸತತ ಪರಿಶ್ರಮ ಹಾಗೂ ಮಾರ್ಗದರ್ಶನದಿಂದ ನಮ್ಮ ಮಕ್ಕಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಸಾಧ್ಯವಾಗುತ್ತಿದೆ. ನಮ್ಮ ಮಕ್ಕಳು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗುತ್ತಿರುವುದು ನಮಗೆ ಬಹಳ ಹೆಮ್ಮೆಯ ಸಂಗತಿಯಾಗಿದೆ,” ಎಂದು ಸಂತೋಷದಿಂದ ಹೇಳಿದರು.
ಈ ಸಂದರ್ಭದಲ್ಲಿ ಅಕಾಡೆಮಿಯ ಪ್ರಾಂಶುಪಾಲರಾದ ಶ್ರೀಮತಿ ರೇಣು ಸಿಂಗ್ ಪಠಾಣೆ, ಅಕಾಡೆಮಿಯ ಪಿ.ಆರ್.ಓ. ಶ್ರೀಮತಿ ಕಾರಂಜಿ ಸ್ವಾಮಿ, ಮುಖ್ಯೋಪಾಧ್ಯಾಯರಾದ ಕುಮಾರಿ ಜ್ಯೋತಿ ರಾಗ, ಸಂಯೋಜಕರು, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮತ್ತು ಪಾಲಕರು ಉಪಸ್ಥಿತರಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಿದರು.


























