
ಯಾದಗಿರಿ:ಡಿ.12: ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ನಿನ್ನೆ ಆಹಾರ ಸೇವನೆಯಿಂದ ಅಸ್ವಸ್ಥರಾಗಿ, ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿಯರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀ ಹರ್ಷಲ್ ಭೋಯರ್ ಅವರು ತಿಳಿಸಿದ್ದಾರೆ.
ಆಹಾರ ಸೇವನೆಯಿಂದ ಅಸ್ವಸ್ಥ ರಾಗಿದ್ದರ ಬಗ್ಗೆ ವಿಷಯ ತಿಳಿದ ತಕ್ಷಣ ದಿನಾಂಕ 10-12-25 ರಂದು ರಾತ್ರಿ 11 ಗಂಟೆಗೆ ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ
ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅವರು, ನೂರು ವಿದ್ಯಾರ್ಥಿಗಳ ಪೈಕಿ 23 ವಿದ್ಯಾರ್ಥಿಗಳು ಹೊಟ್ಟೆ ನೋವು ಹಾಗೂ ವಾಂತಿಯಾಗಿ
ಅಸ್ವಸ್ಥರಾಗಿದ್ದರ ಬಗ್ಗೆ ವಿಚಾರಿಸಿದರು.
ನಂತರ 23 ವಿದ್ಯಾರ್ಥಿನಿಯರ ಪೈಕಿ ನಾಲ್ಕು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವುದನ್ನು ಗಮನಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸೆ ತಜ್ಞರಿಗೆ ಕರೆ ಮಾಡಿ, ನಾಲ್ಕು ವಿದ್ಯಾರ್ಥಿನಿಯರನ್ನು ಜಿಲ್ಲಾ ಆಸ್ಪತ್ರೆ ಯಾದಗಿರಿಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸೆ ತಜ್ಞರು ಮತ್ತು ಇತರೆ ವ್ಯದ್ಯಾಧಿಕಾರಿಗಳು ಈ ನಾಲ್ಕೂ ವಿದ್ಯಾರ್ಥಿನಿಯರಿಗೆ ರಾತ್ರಿ 12 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.
ಕಲುಷಿತ ಆಹಾರ ಅಥವಾ ನೀರು ಸೇವನೆಯಿಂದ ವಾಂತಿ ಮತ್ತು ಹೊಟ್ಟೆ ನೋವು ಬಂದಿರಬಹುದೆಂದು ವ್ಯದ್ಯಾಧಿಕಾರಿಗಳು ತಿಳಿಸಿದ್ದು, ವಸತಿ ನಿಲಯದಲ್ಲಿ ಸಿದ್ದಪಡಿಸಿದ ಚಿಕನ್, ಅನ್ನ, ಸೊಯಾಬಿನ್ ಪಲ್ಯ, ಟಮೋಟೊ ಪಲ್ಯಗಳ ಮತ್ತು ಕುಡಿಯುವ ನೀರನ್ನು ಪರಿಶೀಲನೆ ಪರೀಕ್ಷೆಗಾಗಿ ಆಹಾರ ಸುರಕ್ಷತಾಧಿಕಾರಿಗಳಿಗೆ ಸ್ಯಾಂಪಲ್ ನೀಡಲಾಗಿದೆ.
ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಪ್ರಸ್ತುತ ಗುರುಮಿಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾದ 19 ವಿದ್ಯಾರ್ಥಿನಿಯರು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾದ ನಾಲ್ಕು ವಿದ್ಯಾರ್ಥಿನಿಯರು ಆರೋಗ್ಯವಾಗಿರುವುದರಿಂದ ವಸತಿ ನಿಲಯಕ್ಕೆ ಕಳುಹಿಸಲಾಗಿದೆ.
ಲೋಪದ ಹಿನ್ನೆಲೆಯಲ್ಲಿ
ಈ ವಿಷಯದ ಕುರಿತು ವಿವರಣೆ ನೀಡಲು ಸದರಿ ವಸತಿ ನಿಲಯದ, ನಿಲಯ ಮೇಲ್ವಿಚಾರಕರಾದ
ಕು. ಮಂಜುಳಾ ಇವರಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಮೂಲಕ ಕಾರಣ ಕೇಳುವ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






















