
ಬೀದರ: ಮೇ.೩:ಪಶುವೈದ್ಯಕೀಯ ಶಿಕ್ಷಕರಿಗೆ ಕಳೆದ ಏಳು ವರ್ಷಗಳಿಂದ ನೀಡಲಾಗುತ್ತಿದ್ದ ನಾನ್ ಪ್ರಾöಕ್ಟಿಸಿಂಗ್ ಅಲೋವನ್ಸ್ (ಎನ್‌ಪಿಎ) ಭತ್ಯೆಯನ್ನು ಹಠಾತ್ತನೆ ನಿಲ್ಲಿಸುವಂತೆ ಸರ್ಕಾರ ನೀಡಿರುವ ನಿರ್ದೇಶನ ಶಿಕ್ಷಕರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಇದು ಶಿಕ್ಷಕರ ಹಿತರಕ್ಷಣೆಗೆ ಹಾಗೂ ಚಾಲ್ತಿಯಲ್ಲಿರುವ ನೀತಿ ನಿಯಮಗಳಿಗೆ ವಿರೋಧವಾಗಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಚನ್ನಪ್ಪಗೌಡ ಬಿರಾದಾರ ತಮ್ಮ ಕಳವಳ ವ್ಯಕ್ತಪಡಿಸಿದರು.
ಈ ಕುರಿತು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆಗಳ ವಿಶ್ವವಿದ್ಯಾಲಯ ಬೀದರ ಶಿಕ್ಷಕರ ಸಂಘದ ವತಿಯಿಂದ ಶನಿವಾರ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಪಶುವೈದ್ಯಕೀಯ ಶಿಕ್ಷಕರು ಪಡೆಯುತ್ತಿರುವ ಎನ್‌ಪಿಎ ಭತ್ಯೆ ನಿಯಮಬಾಹಿರವಾಗಿಲ್ಲ. ಸಂಪೂರ್ಣ ಕಾನೂನುಬದ್ಧವಾಗಿದೆ. ಪಶು ಸಂಗೋಪನೆ ಅಭಿವೃದ್ಧಿಗೆ ಪೂರಕವಾಗಿದೆ. ಈ ವೇತನವನ್ನು ನಂಬಿಕೊAಡು ಹಲವು ಶಿಕ್ಷಕರು ಗೃಹಸಾಲ, ಮಕ್ಕಳ ಶಿಕ್ಷಣದ ವೆಚ್ಚಗಳಂತಹ ದೀರ್ಘಕಾಲದ ಆರ್ಥಿಕ ಬದ್ಧತೆಗಳನ್ನು ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಬೋಧಕ ಸಮುದಾಯಕ್ಕೆ ಈ ನಿರ್ಧಾರ ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಮಹಾವಿದ್ಯಾಲಯಗಳು ರೈತರಿಗೆ ಉಚಿತ ಚಿಕಿತ್ಸೆ, ರೋಗಪತ್ತೆ ಸೇರಿದಂತೆ ಹಲವು ರೀತಿಯ ಸೇವೆಯು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಿವೆ. ಹೀಗಾಗಿ ಭಾರತ ಸರ್ಕಾರದ ೨೦೧೬ರ ವಿಸಿಐ, ಐಸಿಎಆರ್ ಆದೇಶಗಳು ಪಶುವೈದ್ಯಕೀಯ ಬೋಧಕ ಸಿಬ್ಬಂದಿಗಳು ಎನ್‌ಪಿಎ ಪಡೆಯಲು ಅರ್ಹರು ಎಂದು ಹೇಳುತ್ತವೆ. ೨೦೧೭ರಲ್ಲಿ ಭಾರತ ಸರ್ಕಾರದ ಹಣಕಾಸು ಸಚಿವಾಲಯ ಶೇ. ೨೦ ರಷ್ಟು ಭತ್ಯೆ ನೀಡಬೇಕೆಂದು ಆದೇಶ ನೀಡಿದೆ. ಇದೀಗ ಹಠಾತ್ತನೆ ವೇತನ ಕಡಿತಗೊಳಿಸಿದರೆ ಮೂಕ ಪ್ರಾಣಿಗಳ ಸೇವೆ ಮಾಡುವ ಪಶುವೈದ್ಯಕೀಯ ಶಿಕ್ಷಕರ ಮೂಕವೇದನೆ ಆಲಿಸುವವರು ಯಾರು? ಎಂದು ಪ್ರಶ್ನಿಸಿದರಲ್ಲದೆ, ಸರ್ಕಾರದ ಈ ನೀತಿ ಮಾನವ ಹಕ್ಕುಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದರು.
೭ನೇ ಕೇಂದ್ರ ವೇತನ ಆಯೋಗದ ಅಡಿಯಲ್ಲಿ ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ವೇತನ ಪರಿಷ್ಕರಣೆ ಜಾರಿಗೊಳಿಸುವಾಗ ಬೋಧಕರಿಗೆ ಎನ್‌ಪಿಎ ಘಟಕ ಸೇರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ವಿ.ವಿ.ಗೆ ಸೂಚನೆ ನೀಡಿದೆ. ಅದರಂತೆ ಅಂತೀಮವಾಗಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಆದೇಶ ಹೊರಡಿಸಿ ೦೧-೦೪-೨೦೧೯ ರಂದು ವೇತನದಲ್ಲಿ ಎನ್‌ಪಿಎ ಸೇರಿಸುವುದು ವಿಶ್ವವಿದ್ಯಾಲಯದ ಏಕಪಕ್ಷೀಯ ನಿರ್ಧಾರವಾಗಿರಲಿಲ್ಲ. ಇದು ಕರ್ನಾಟಕ ಸರ್ಕಾರದ ಪಶಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆಯ ನಿರ್ದೇಶನದ ಮೇಲೆಯೇ ಆರಂಭಗೊAಡಿದೆ. ೭-೮-೨೦೦೮ರ ಸರ್ಕಾರದ ಪತ್ರವೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದು ಚನ್ನಪ್ಪಗೌಡ ಬಿರಾದಾರ ತಿಳಿಸಿದರು.
ಹೋರಾಟ ಅನಿವಾರ್ಯ: ಕರ್ನಾಟಕ ಸರ್ಕಾರವು ಏ. ೨೧, ೨೦೨೬ರಂದು ಎನ್‌ಪಿಎ ಸ್ಥಗಿತದ ಕುರಿತು ಹೊರಡಿಸಿದ ಆದೇಶವನ್ನು ಹಿಂಪಡೆಯುವAತೆ ಕೋರಿ ನಮ್ಮ ಸಂಘದ ವತಿಯಿಂದ ೨೭-೦೪-೨೦೨೬ ರಂದು ವಿಶ್ವವಿದ್ಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ. ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಬೋಧಕರ ಹಿತರಕ್ಷಣೆಯ ದೃಷ್ಟಿಯಿಂದ ಸರ್ಕಾರ ಈ ಎನ್‌ಪಿಎ ರದ್ಧತಿ ನಿರ್ದೇಶನ ತಕ್ಷಣ ಹಿಂಪಡೆಯಬೇಕು. ಈ ಹಿಂದೆಯೂ ಸರ್ಕಾರ ತಾನು ನೀಡಿದ ಅನುದಾನದಿಂದ ಹಾಗೂ ಎಚ್‌ಆರ್‌ಎಂಎಸ್ ಮೂಲಕವೇ ನೀಡಿದೆ. ಇದೀಗ ಅದನ್ನು ವಂಚನೆ ಎಂದಾಗಲೀ ಅಥವಾ ಆಕ್ರಮ ಎಂದಾಗಲೀ ಎನ್ನುವುದು ಸಂಪೂರ್ಣ ಸತ್ಯಕ್ಕೆ ದೂರವಾದ ಸಂಗತಿ. ಹೀಗಾಗಿ ಒಂದು ವಾರದ ಒಳಗಾಗಿ ಸರ್ಕಾರ ಎನ್‌ಪಿಎ ರದ್ಧತಿ ನಿರ್ದೇಶನ ಹಿಂಪಡೆಯದಿದ್ದಲ್ಲಿ ವಿಶ್ವವಿದ್ಯಾಲಯದ ೩೦ ಆವರಣಗಳಲ್ಲಿ ಶಿಕ್ಷಕರ ಸಂಘವು ಹೋರಾಟ ಮಾಡಲು ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಕುಲಪತಿಗಳು, ಕುಲಸಚಿವರು, ಆಡಳಿತ ಮಂಡಳಿ ಹಾಗೂ ಸರ್ಕಾರ ಬೋಧಕರ ಹಿತರಕ್ಷಣೆ ಕಾಯಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಚನ್ನಪ್ಪಗೌಡ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಸಂಘದ ಸಂಘಟನಾ ಕಾರ್ಯದರ್ಶಿ ವಿದ್ಯಾಸಾಗರ, ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ ಡಾ. ಶ್ರೀನಿವಾಸ ಶೆಟ್ಟಿ, ಮಹಿಳಾ ಘಟಕದ ಶಿಕ್ಷಕರಾದ ಡಾ. ಮಾಲಾಶ್ರೀ, ಸಂಘದ ಪ.ಜಾ.ಪ.ಪಂ. ಸಂಘಟನಾ ಕಾರ್ಯದರ್ಶಿ ಡಾ. ಸಂಜೀವಕುಮಾರ ಟೋಪನ್, ಮಹಿಳಾ ಪ್ರಮುಖರಾದ ಡಾ. ವಿಜಯಲಕ್ಷಿö??Ã ಸೇರಿದಂತೆ ಇನ್ನಿತರ ಬೋಧಕರು ಉಪಸ್ಥಿತರಿದ್ದರು.
























