
ಕಲಬುರಗಿ: ದಕ್ಷಿಣ ಭಾರತದಲ್ಲೇ ಅಪರೂಪವಾಗಿ ನಿರ್ಮಾಣವಾಗಿರುವ ನಗರದ ಕೆಸರಟಗಿ ರಸ್ತೆಯ ಸಮಾಧಾನದಲ್ಲಿನ ಧ್ಯಾನ ಮಂದಿರದ 9ನೇ ವಾರ್ಷಿಕೋತ್ಸವ ಶುಕ್ರವಾರ ನಡೆಯಿತು.
2017ರಲ್ಲಿ ಫೆಬ್ರವರಿಯಲ್ಲಿ ಧ್ಯಾನ ಮಂದಿರ ಉದ್ಘಾಟನೆಗೊಂಡು ಶುಭಾರಂಭವಾಗಿರುವ ಧ್ಯಾನ ಮಂದಿರದ ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಲ್ಲಿ ಮಾನಸಿಕ ಒತ್ತಡ ನಿರ್ವಹಣೆ ಕುರಿತಾದ ಜಾಗೃತಿ ಅಭಿಯಾನ ಕಾರ್ಯಕ್ರಮ ಸಹ ಮಾದರಿಯಾಗಿ ಆಯೋಜಿಸಲಾಗಿತ್ತು.
ಸಮಾಜದಲ್ಲಿಂದು ಮನುಷ್ಯ ಒತ್ತಡ ಬದುಕಿನ ನಡುವೆ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹೀಗಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದು ಅಗತ್ಯವಿದೆ ಎಂಬುದನ್ನು ಮನಗಂಡು ಭಕ್ತರ ಉದ್ದಾರಕ್ಕಾಗಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಅಪೇಕ್ಷೆ ಹಾಗೂ ಸಂಕಲ್ಪ ಮೇರೆಗೆ ಧ್ಯಾನ ಮಂದಿರ ತಲೆ ಎತ್ತಿದೆ ಎಂದು ಕಾರ್ಯಕ್ರಮ ಆರಂಭದಲ್ಲಿ ವಿವರಣೆ ನೀಡಲಾಯಿತು.
ತದನಂತರ ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆ ಕುರಿತಾಗಿ ತಜ್ಷ ವೈದ್ಯರಿಂದ ಉಪನ್ಯಾಸ ಹಾಗೂ ಸೂಕ್ತ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಮನೋವೈದ್ಯ ಡಾ. ರಾಹುಲ್ ಮಂದಕನಳ್ಳಿ ಮಾತನಾಡಿ, ಜೀವನದಲ್ಲಿ ಶಿಸ್ತು ಇರಬೇಕು. ಶಿಸ್ತಿನೊಂದಿಗೆ ಸಮಯ ಪರಿಪಾಲನೆ ಹಾಗೂ ಕಠಿಣ ಕಾರ್ಯ ಹೊಂದಿದ್ದರೆ ಸಾಧ್ಯವಾದ ಮಟ್ಟಿಗೆ ಒತ್ತಡ ತಡೆಯಬಹುದಾಗಿದೆ. ಪ್ರಮುಖವಾಗಿ ಶಿಸ್ತು, ಸಮಯ ಪಾಲನೆ, ಕೆಲಸ ಮಾಡುವುದರ ವಿಷಯದಲ್ಲಿ ರಾಜೀ ಬೇಡವೇ ಬೇಡ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕಿ ಡಾ. ಪ್ರಫುಲಾ ಜೆ. ವಾಲಿ, ಸಂಬಂಧಪಡದ ವಿಷಯಗಳನ್ನು ತಲೆಯಲ್ಲಿ ಹಾಕಿಕೊಳ್ಳಬಾರದು. ವಿನೋದ ಕಾಂಬ್ಳೆ ಹಾಗೂ ಸಚಿನ್ ತೆಂಡೂಲ್ಕರ್ ಒಮ್ಮೆ ಕ್ರಿಕೆಟ್ ಗೆ ಬಂದರೂ ಸಚಿನ್ ನಿಂದ ಏಕೆ ಹೆಚ್ಚಿನ ಸಾಧನೆಯಾಯಿತು ಎಂಬುದನ್ನು ಅವಲೋಕಿಸಬೇಕು. ಸಚಿನ್ ರಲ್ಲಿ ಕಠಿಣತೆ ಅಭ್ಯಾಸವಿತ್ತು. ನಾವಿದುನ್ನು ಜೀವನುದ್ದಕ್ಕೂ ಅಳವಡಿಸಿಕೊಳ್ಳಬೇಕೆಂದರು.
ಬಸವೇಶ್ವರ ಆಸ್ಪತ್ರೆಯ ಐಸಿಯು ಇನ್ ಚಾರ್ಜ್ ಡಾ. ಸೋಹೈಲ್ ಶಾಲಿ ಅವರು, ಮಾನಸಿಕ ಒತ್ತಡವನ್ನು ದೀರ್ಘ ಉಸಿರಾಟ ಹಾಗೂ ಧ್ಯಾನದಿಂದ ಕಡಿಮೆ ಮಾಡಬಹುದಾಗಿದೆ. ಸಮಸ್ಯೆಗಳು ಯಾವವು? ಎಂದು ಪಟ್ಟಿ ಮಾಡಿ, ತದನಂತರ ಧ್ಯಾನ ಮಾಡಿ, ಆಮೇಲೆ ಸಮಸ್ಯೆಗಳನ್ನು ಮತ್ತೆ ಬರೆಯಿರಿ, ಆದರೆ ಇವು ಸಮಸ್ಯೆಗಳಾ? ಎಂದು ಮನದಲೇ ಮೂಡುತ್ತದೆ ಎಂದು ವಿವರಣೆ ನೀಡಿದರು.
ಇಂದು ಎಲ್ಲರದ್ದು ಒತ್ತಡದ ಜೀವನವಾಗಿದೆ. ಹೀಗಾಗಿ ಧ್ಯಾನ ಹಾಗೂ ಪ್ರಾಣಾಯಾಮ ಬಹು ಅಗತ್ಯವಾಗಿದೆ. ಸಮಯವೇ ಇಲ್ಲ ಏನಿಸುತ್ತದೆ. ಆದರೆ ಶರೀರದ ಆರೋಗ್ಯ ವೃದ್ಧಿಗೆ ಸಮಯ ನೀಡಬೇಕು. ಇಲ್ಲದಿದ್ದರೆ ಅದು ಸಮಯ ನೀಡುತ್ತದೆ ಎಂದು ಡಾ. ಸೋಹೈಲ್ ಮಾರ್ಮಿಕವಾಗಿ ನುಡಿದರು.
ಡಾ. ಸಂಗಮೇಶ ಹತ್ತಿ ಹಾಗೂ ಶಿವಣ್ಣಗೌಡ ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಶಾಲಾ ಮಕ್ಕಳಿಗೆ ಹಾಗೂ ಸಮಾಧಾನದ ಭಕ್ತರಿಗೆ ಒತ್ತಡ ನಿವಾರಣೆ ನಿಟ್ಟಿನಲ್ಲಿ ಕೈಗೊಳ್ಳಬೇಕಿರುವ ಸಂಬಂಧಿಸಿದಂತೆ ಸರಳ ಯೋಗಾಸನ ಹೇಳಿ ಕೊಟ್ಟರು. ಸಮಾಧಾನ ಭಕ್ತರಲ್ಲದೇ ಇತರ ಭಕ್ತರು ಧ್ಯಾನ ಮಂದಿರಕ್ಕೆ ಆಗಮಿಸಿ ಧ್ಯಾನ ಮಾಡಿ ಮನಸ್ಸಿನ ಭಾರ ಕಡಿಮೆ ಮಾಡಿಕೊಳ್ಳುತ್ತಿದ್ದು, ಸಮಾಜದಲ್ಲಿಂದು ಮನುಷ್ಯ ಒತ್ತಡ ಬದುಕಿನ ನಡುವೆ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಹೀಗಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುವುದು ಬಹು ಅಗತ್ಯವಿದೆ ಎಂದು ವೈದ್ಯರು ಹಾಗೂ ಯೋಗ ಶಿಕ್ಷಕರು ಸಮಗ್ರ ವಿವರಣೆ ನೀಡಿದರು.
ಮೌನ ಹಾಗೂ ಧ್ಯಾನ ನೆಮ್ಮದಿ ತರುತ್ತದೆ. ಪ್ರತಿ ದಿನ ಅರ್ಧಗಂಟೆ ಶೃದ್ಧೆಯಿಂದ ಧ್ಯಾನ ಮಾಡಿದರೆ ಕ್ಯಾನ್ಸರ್ ರೋಗ ಹೋಗುತ್ತದೆಯಲ್ಲದೇ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದ್ದರಿಂದ ದಿನಾಲು ಅರ್ಧಗಂಟೆ ಮೌನಧಾರಿಗಳಾಗಿ ಧ್ಯಾನ ಮಾಡುವ ರೂಢಿ ಬೆಳೆಸಿಕೊಳ್ಳಬೇಕು. ದೇಹ ದಂಡಿಸುವ ದುಡಿಮೆಯೂ ಅಗತ್ಯವಾಗಿದೆ ಎಂದು ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳವರು ಲಿಖಿತವಾಗಿ ಬರೆದು ತಿಳಿಸುವುದನ್ನು ಭಕ್ತರಾದ ನಾವೆಲ್ಲರೂ ಅಳವಡಿಸಿಕೊಂಡು ಸದೃಢ ಆರೋಗ್ಯ ಹೊಂದಲು ಮುನ್ನುಡಿ ಹಾಡಬೇಕೆಂದರು.
ದಶಮಾನೋತ್ಸವ: ಸಮಾಧಾನದ ಶ್ರೀಗುರು ಸೇವಾ ಸಂಸ್ಥೆಯ ಎ.ಬಿ. ಪಾಟೀಲ್ ಬಮನಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮುಂದಿನ ವರ್ಷ ಧ್ಯಾನ ಮಂದಿರದ ದಶಮಾನೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಮಾಧಾನದ ಶ್ರೀಗುರುದೇವ ಸೇವಾ ಸಂಸ್ಥೆ ವತಿಯಿಂದ ಮಕ್ಕಳಲ್ಲಿ ಮಾನಸಿಕ ಒತ್ತಡ ನಿವಾರಣೆ ಕುರಿತಾಗಿ ಜಾಗೃತಿ ಸೇರಿದಂತೆ ಇತರ ಸಾಮಾಜಿಕ ಸೇವಾ ಕಾರ್ಯಚಟುವಟಿಕೆಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ ಎಂದು ಹೇಳಿದರು. ಮಲ್ಲಿಕಾರ್ಜುನ ಶೆಟ್ಟಿ ಸ್ವಾಗತಿಸಿದರು. ಶರಣು ಪಾಟೀಲ್ ವಂದಿಸಿದರು.



























