
ಯಾದಗಿರಿ: ಫೆ.೭:ಜಿಲ್ಲೆಯ ಪ್ರಾಣಿ ಹಾಗೂ ಪಕ್ಷಿಗಳಿಗೆ ಸಮರ್ಪಕ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ಸೌಲಭ್ಯವನ್ನು ಸ್ಥಳೀಯ ಮಟ್ಟದಲ್ಲೇ ಒದಗಿಸುವ ಉದ್ದೇಶದಿಂದ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.ಇನ್ನೂ ನಗರದ ಡಾ. ಬಿ.ಆರ್. ಅಂಬೇಡ್ಕರ್ ನಗರದಲ್ಲಿರುವ ಅಂಚೆ ಇಲಾಖೆ ಹಿಂಭಾಗದ ನಿವೇಶನದಲ್ಲಿ, ೨೦೨೨-೨೩ನೇ ಸಾಲಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಆರ್‌ಐಡಿಎಫ್ (ಖIಆಈ) ಯೋಜನೆಯ ಟ್ರಂಚ್-ಘಿಘಿಗಿIII ಅಡಿಯಲ್ಲಿ ಅಂದಾಜು ?೮೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪ್ರಾದೇಶಿಕ ಸಂಶೋಧನಾ ಪ್ರಯೋಗಾಲಯದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಾಣಿ ಅಥವಾ ಪಕ್ಷಿಗಳಿಗೆ ಅನಾರೋಗ್ಯ ಕಾಣಿಸಿಕೊಂಡಾಗ ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪ್ರಯೋಗಾಲಯ ಪರೀಕ್ಷೆಗಳಿಗೆ ಕಲಬುರಗಿ ಅಥವಾ ಬಳ್ಳಾರಿ ಜಿಲ್ಲೆಗಳಿಗೆ ಕರೆದೊಯ್ಯಬೇಕಾಗುತ್ತಿತ್ತು. ಇದರಿಂದ ಪಶುಪಾಲಕರಿಗೆ ಅನಾವಶ್ಯಕ ವೆಚ್ಚ ಮತ್ತು ವಿಳಂಬ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ರಾಜ್ಯ ಸರ್ಕಾರ ನಬಾರ್ಡ್ ಯೋಜನೆಯಡಿ ಅನುದಾನ ಮಂಜೂರು ಮಾಡಿ ಜಿಲ್ಲೆಯಲ್ಲಿ ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಿದೆ ಎಂದು ತಿಳಿಸಿದರು.
ಈ ಪ್ರಯೋಗಾಲಯದಿಂದ ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗಲಿದ್ದು, ಪಶುಸಂತತಿ ಅಭಿವೃದ್ಧಿ, ರೋಗ ನಿಯಂತ್ರಣ ಹಾಗೂ ಸಮಗ್ರ ಆರೋಗ್ಯ ಸಂರಕ್ಷಣೆಗೆ ನೆರವಾಗಲಿದೆ ಎಂದು ಹೇಳಿದರು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ರಾಜು ದೇಶಮುಖ ಮಾತನಾಡಿ, ಪ್ರಯೋಗಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಸುಮಾರು ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ಜೈವಿಕ ತಂತ್ರಜ್ಞರು ಹಾಗೂ ತಜ್ಞ ವೈದ್ಯರು ಸೇವೆ ಸಲ್ಲಿಸಲಿದ್ದು, ಅಗತ್ಯ ಪರೀಕ್ಷೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ ಎಂದರು. ಜೊತೆಗೆ ಸುಮಾರು ?೬೦ ಲಕ್ಷ ಮೌಲ್ಯದ ಆಧುನಿಕ ಪ್ರಯೋಗಾಲಯ ಉಪಕರಣಗಳನ್ನು ಖರೀದಿಸುವ ಯೋಜನೆಯೂ ಇದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಮಲ್ಲಿಕಾರ್ಜುನ ಇಟೆ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣಭೂಪಾಲರೆಡ್ಡಿ ನಾಯ್ಕಲ್, ಹಣಮಂತ ನಾಯಕ, ಚನ್ನಕೇಶವ ಬಾಣತಿಹಾಳ, ಮಲ್ಲಣ್ಣ ದಾಸನಕೇರಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಶ್ಯಾಮಸನ್ ಮಾಳಿಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



























