ಬೀದಿ ನಾಯಿ ದಾಳಿ; ಮಗುವಿಗೆ ಗಾಯ

ಬೆಂಗಳೂರು,ನ.೮- ಬೆಳ್ಳಂದೂರಿನ ಪ್ರೆಸ್ಟೀಜ್ ಟೆಕ್ ಪಾರ್ಕ್ ಆವರಣದಲ್ಲಿ ಬೀದಿ ನಾಯಿಗಳು ನಡೆಸಿದ ದಾಳಿಯಿಂದ ಎರಡು ವರ್ಷದ ಮಗು ಗಾಯಗೊಂಡಿದೆ.


ಘಟನೆಯಿಂದ ಸ್ಥಳೀಯ ಇಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಸಿಕೆ ಹಾಕದ ಮತ್ತು ಆಕ್ರಮಣಕಾರಿ ನಾಯಿಗಳ ಹಾವಳಿಯ ಬಗ್ಗೆ ಇವರು ದೀರ್ಘಕಾಲದಿಂದ ದೂರು ನೀಡುತ್ತಲೇ ಬಂದಿದೆ. ಕ್ಯಾಂಪಸ್‌ನೊಳಗೆ ಮಗು ತನ್ನ ತಾಯಿಯೊಂದಿಗೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. “ಎರಡು ಡಜನ್‌ಗೂ ಹೆಚ್ಚು ನಾಯಿಗಳ ಗುಂಪು ಆವರಣದೊಳಗೆ ಸ್ವಚ್ಛಂದವಾಗಿ ಓಡಾಡಿಕೊಂಡಿರುತ್ತವೆ. ಅವುಗಳಲ್ಲಿ ಒಂದು ಹಿಂಬದಿಯಿಂದ ಹಾರಿಬಂದು ನನ್ನ ಮಗಳ ತೋಳು ಮತ್ತು ಭುಜಕ್ಕೆ ಕಚ್ಚಿದೆ.


ಹಲವಾರು ಬಾರಿ ದೂರು ನೀಡಿದರೂ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.ಬೀದಿ ನಾಯಿಗಳಿಂದ ಹೆಚ್ಚಿನ ಅಪಾಯವಿದೆ, ರಸ್ತೆಯಲ್ಲಿ ಭಯಬೀತರಾಗಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಪ್ರತಿ ೫-೬ ತಿಂಗಳಿಗೊಮ್ಮೆ ಹೊಸ ನಾಯಿಗಳ ಗುಂಪುಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಲಸಿಕೆಯನ್ನೂ ಹಾಕಿಲ್ಲ, ಸಂತಾನಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡಿಲ್ಲ. ದಿನೇ ದಿನೇ ಅವುಗಳ ಆಕ್ರಮಣಕಾರಿ ವರ್ತನೆ ಹೆಚ್ಚುತ್ತಿದೆ. ಅವುಗಳನ್ನು ಹಿಡಿಯುವ ಹಲವು ಪ್ರಯತ್ನಗಳು ವಿಫಲವಾಗಿವೆ,” ಎಂದು ಮತ್ತೊಬ್ಬ ನಿವಾಸಿ ಹೇಳಿದರು.