ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಪರಿಹಾರಕ್ಕೆ ಕ್ರಮ

ಬೀದರ್: ಮಾ.2:ಮಾನ್ಯತೆ ನವೀಕರಣ ಪ್ರಕ್ರಿಯೆ ಸರಳಗೊಳಿಸುವುದು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಅಖಿಲ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ನಿಯೋಗಕ್ಕೆ ಈ ಆಶ್ವಾಸನೆ ನೀಡಿದರು.
ಮಾನ್ಯತೆ ನವೀಕರಣಕ್ಕೆ ಹಲವು ಷರತ್ತು ವಿಧಿಸಿದ ಕಾರಣ ಸಂಸ್ಥೆಗಳು ತೊಂದರೆ ಅನುಭವಿಸಬೇಕಾಗಿದೆ. ಶಾಲಾ ಭೂ ಪರಿವರ್ತನೆ, 1 ಎಕರೆ ಆಟದ ಮೈದಾನ, 6 ವರ್ಷ ಪೂರೈಸಿದ ಮಕ್ಕಳಿಗಷ್ಟೇ 1ನೇ ತರಗತಿಗೆ ಪ್ರವೇಶ ಮೊದಲಾದ ನಿಯಮಗಳಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟಕರವಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ ತಿಳಿಸಿದರು.
ಆರ್.ಟಿ.ಇ. ಮರು ಜಾರಿಗೊಳಿಸಬೇಕು ಎಂದು ಬೇಡಿಕೆ ಮಂಡಿಸುತ್ತಲೇ ಬರಲಾಗಿದೆ. ಈವರೆಗೆ ಈ ದಿಸೆಯಲ್ಲಿ ಕ್ರಮ ಕೈಗೊಂಡಿಲ್ಲ. ಖಾಸಗಿ ಶಾಲಾ, ಕಾಲೇಜುಗಳ ಹಲವು ವರ್ಷಗಳ ಅನುದಾನದ ಬೇಡಿಕೆಯೂ ಈಡೇರಿಲ್ಲ ಎಂದು ಹೇಳಿದರು.
ಇದಕ್ಕೆ ಸ್ಪಂದಿಸಿದ ರಶ್ಮಿ ಅವರು ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಮನವರಿಕೆಯಾಗಿದೆ. 1 ಎಕರೆ ಆಟದ ಮೈದಾನ ನಿಯಮದಿಂದ ವಿನಾಯಿತಿ ಕಲ್ಪಿಸಲಾಗುವುದು. ಪಂಚಾಯಿತಿ ಮಟ್ಟದಲ್ಲೇ ಎ ಮತ್ತು ಬಿ ಖಾತೆ ಕೊಡುತ್ತಿರುವ ಕಾರಣ ಭೂ ಪರಿವರ್ತನೆ ಸಮಸ್ಯೆ ಬಾಧಿಸುವುದಿಲ್ಲ. 1ನೇ ತರಗತಿ ಪ್ರವೇಶಕ್ಕೆ ವಯೋಮಿತಿಯಲ್ಲಿ ಎರಡರಿಂದ ಮೂರು ತಿಂಗಳು ಸಡಿಲಿಕೆ ಕೊಡಲಾಗುವುದು. ಇತರ ಸಮಸ್ಯೆಗಳನ್ನೂ ಬಗೆಹರಿಸಲಾಗುವುದೆಂದು ಭರವಸೆ ನೀಡಿದ್ದಾರೆಂದು ರೇವಣಸಿದ್ದಪ್ಪ ಜಲಾದೆ ಹೇಳಿದ್ದಾರೆ.
ಸಂಘದ ರಾಜ್ಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಉಪಾಧ್ಯಕ್ಷರಾದ ಎಂ. ಮೌಲಾಲಿ, ಎನ್.ಡಿ. ನದಾಫ್, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಕಲ್ಯಾಣ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ಮಣಗೇರಿ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ರಾಮ ಮೋಹನ್, ಗುಂಡಯ್ಯ ತೀರ್ಥ ಮತ್ತಿತರರು ಇದ್ದರು.