Home ಜಿಲ್ಲೆ ಬೆಂಗಳೂರು ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ಕೃಷಿ ಪರಿಕರಗಳು ಸಮರ್ಪಕ ಲಭ್ಯತೆಗೆ ಕ್ರಮ

ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ಕೃಷಿ ಪರಿಕರಗಳು ಸಮರ್ಪಕ ಲಭ್ಯತೆಗೆ ಕ್ರಮ

ಮಾಲೂರು ಮೇ೨೮ : ತಾಲ್ಲೂಕಿನಲ್ಲಿ ೨೦೨೬-೨೭ನೇ ಸಾಲಿನ ಪೂರ್ವ ಖರೀಫ್ ಹಂಗಾಮಿಗಾಗಿ ಕೃಷಿ ಇಲಾಖೆಯಿಂದ ಅಗತ್ಯ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಕೃಷಿ ಪರಿಕರಗಳು ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.


ತಾಲ್ಲೂಕಿನ ವಿವಿಧ ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜಗಳಾದ ರಾಗಿ, ಜೋಳ, ಮೆಕ್ಕೆಜೋಳ, ತೊಗರಿ, ನೆಲಗಡಲೆ ಹಾಗೂ ತರಕಾರಿ ಬೀಜಗಳ ಸಮರ್ಪಕ ದಾಸ್ತಾನು ಇಡಲಾಗಿದೆ ಸಾವಯವ ಪೋಷಕಾಂಶಗಳ ಗೊಬ್ಬರುಗಳು ಸಹ ಲಭ್ಯವಿದೆ, ರಸಗೊಬ್ಬರಗಳಾದ ಯೂರಿಯಾ, ಡಿಎಪಿ, ಎಂಒಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಲಭ್ಯತೆ ಕುರಿತು ನಿಯಮಿತ ಪರಿಶೀಲನೆ ನಡೆಸಲಾಗುತ್ತಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ರೈತರ ಸಭೆಗಳನ್ನು ನಡೆಸಿ, ಮಳೆ ಆಧಾರಿತ ಬೆಳೆ ಯೋಜನೆ, ನೀರಿನ ಸಂರಕ್ಷಣೆ, ಕೃಷಿ ಹೊಂಡಗಳ ಸುರಕ್ಷತೆ, ಸಮತೋಲನ ಗೊಬ್ಬರ ಬಳಕೆ ಹಾಗೂ ಸಮಗ್ರ ಕೀಟ ನಿರ್ವಹಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.


ಪ್ರಸ್ತುತ ತಾಲ್ಲೂಕಿನಲ್ಲಿ ಮುಂಗಾರು ಪೂರ್ವ ಮಳೆಯು ಸಾಧಾರಣ ಪ್ರಮಾಣದಲ್ಲಿ ದಾಖಲಾಗಿದ್ದು, ಕೆಲವೊಂದು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಬಿತ್ತನೆ ಕಾರ್ಯಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ಕಳೆದ ವರ್ಷದ ಹೋಲಿಕೆಯಲ್ಲಿ ಈ ಬಾರಿ ಮಳೆಯ ಪ್ರಮಾಣ ಸುಧಾರಣೆಯಾಗಿದ್ದು, ರೈತರು ಬಿತ್ತನೆಗೆ ಅಗತ್ಯ ಸಿದ್ಧತೆಗಳನ್ನು ಆರಂಭಿಸಿದ್ದಾರೆ.


ಮಳೆಯ ಹಂಚಿಕೆ ಸಮಾನವಾಗಿಲ್ಲದ ಕಾರಣ ರೈತರು ಸ್ಥಳೀಯ ಹವಾಮಾನ ಮಾಹಿತಿ ಆಚಿಧರಿಸಿ ಬೆಳೆ ಆಯ್ಕೆ ಮಾಡಿಕೊಳ್ಳಬೇಕು. ಮಳೆಯ ಪ್ರಮಾಣ ಹೆಚ್ಚಾದ ಸಂದರ್ಭದಲ್ಲಿ ನೀರು ಹರಿದು ಹೋಗದಂತೆ ಕೃಷಿ ಭೂಮಿಯಲ್ಲಿ ಮಣ್ಣಿನ ಮತ್ತು ನೀರಿನ ಸಂರಕ್ಷಣಾ ಕ್ರಮಗಳನ್ನು ಅನುಸರಿಸಲು ಕೃಷಿ ಇಲಾಖೆ ಸಲಹೆ ನೀಡಿದೆ.
ರೈತರು ಅಧಿಕೃತ ಮಾರಾಟ ಮಳಿಗೆಗಳಿಂದಲೇ ಬೀಜ ಮತ್ತು ಗೊಬ್ಬರ ಖರೀದಿಸಿ ಕಡ್ಡಾಯವಾಗಿ ಬಿಲ್ ಪಡೆಯಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂರ್ಕಿಸಲು ಕೋರಲಾಗಿದೆ.


ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ರಸಗೊಬ್ಬರಗಳ ಕೊರತೆ ಇಲ್ಲ ನಗರದ ಎಲ್ಲಾ ರಸಗೊಬ್ಬರ ಮಾರಾಟ ಅಂಗಡಿ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ಎಂ ಆರ್ ಪಿ ದರದಂತೆ ಮಾರಾಟ ಮಾಡಲು ಸೂಚಿಸಲಾಗಿದೆ ರಸಗೊಬ್ಬರ ಅಗತ್ಯವಿರುವ ರೈತರು ಪಹಣಿ ಹಾಗೂ ಆಧಾರ್ ಕಾರ್ಡ್ ನೀಡಿ ರಸಗೊಬ್ಬರಗಳನ್ನು ಪಡೆಯಬಹುದಾಗಿದೆ.
ಮಾಲೂರು ತಾಲ್ಲೂಕಿನ ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡವರು ಇತ್ತೀಚಿನ ದಿನಗಳಲ್ಲಿ ಕೃಷಿ ಹೊಂಡಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳು ಹಾಗೂ ಜೀವಹಾನಿ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಹೊಂಡಗಳಿಗೆ ಕಡ್ಡಾಯವಾಗಿ ಸುರಕ್ಷತಾ ತಂತಿ ಬೇಲಿ ನಿರ್ಮಿಸುವುದು ಅತ್ಯಾವಶ್ಯಕವಾಗಿದೆ.


ಕೃಷಿ ಹೊಂಡಗಳು ರೈತರ ನೀರಾವರಿ ಅವಶ್ಯಕತೆಗಾಗಿ ನಿರ್ಮಿಸಲ್ಪಟ್ಟಿದ್ದರೂ, ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಇದ್ದಲ್ಲಿ ಸಾರ್ವಜನಿಕರು, ಮಕ್ಕಳು ಹಾಗೂ ಜಾನುವಾರುಗಳಿಗೆ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆ ಎಲ್ಲಾ ಕೃಷಿ ಹೊಂಡಗಳ ಸುತ್ತಲೂ ಶೀಘ್ರವಾಗಿ ತಂತಿ ಬೇಲಿ ನಿರ್ಮಿಸುವಂತೆ ರೈತರಿಗೆ ಸೂಚಿಸಲಾಗಿದೆ.
ಕೃಷಿ ಇಲಾಖೆ ವತಿಯಿಂದ ಈಗಾಗಲೇ ವಿವಿಧ ಗ್ರಾಮಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳು, ಸಾರ್ವಜನಿಕ ಪ್ರಕಟಣೆಗಳು ಹಾಗೂ ವಿಡಿಯೋ ಪ್ರಚಾರಗಳ ಮೂಲಕ ಸುರಕ್ಷತಾ ಕುರಿತು ಮಾಹಿತಿ ನೀಡಲಾಗಿದೆ. ಆದಾಗ್ಯೂ ಇನ್ನೂ ಬೇಲಿ ನಿರ್ಮಿಸದಿರುವ ರೈತರು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಸುರಕ್ಷತಾ ದೃಷ್ಟಿಯಿಂದ ಬೇಲಿ ನಿರ್ಮಿಸದ ಕೃಷಿ ಹೊಂಡಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಮಾನವೀಯ ನೆಲೆಯಲ್ಲಿ ಎಲ್ಲ್ಲಾ ರೈತರು ಇಲಾಖೆಯೊಂದಿಗೆ ಸಹಕರಿಸುವಂತೆ ಹೇಳಿದರು.