
ಚಿಕ್ಕಬಳ್ಳಾಪುರ ಫೆ. ೧೬-ಪುರಾತತ್ವ ಇಲಾಖೆಯ ಆಡಳಿತ ನಿರ್ವಹಣೆಯಲ್ಲಿ ರುವ ದಕ್ಷಿಣ ಕಾಶಿ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಪುರಾತತ್ವ ಇಲಾಖೆಯೊಂದಿಗೆ ಸಮಾಲೋಚಿಸಿ ಮುಂದಿನ ದಿನಗಳಲ್ಲಿ ಈ ದೇವಾಲಯದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಪ್ರಭು ತಿಳಿಸಿದರು.
ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಆಚರಣೆ ಅಂಗವಾಗಿ ಸಾವಿರಾರು ಭಕ್ತಾದಿಗಳು ಆಗಮಿಸಿದ್ದು ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಜಿಲ್ಲಾಧಿಕಾರಿಗಳು ಗುದ್ದು ಸ್ಥಳಕ್ಕೆ ಭೇಟಿ ನೀಡಿ ದೂರದ ಊರುಗಳಿಂದ ಆಗಮಿಸಿದ್ದ ಯಾತ್ರಿಕರೊಂದಿಗೆ ಮಾತನಾಡಿ ಅವರಿಗೆ ಇರುವ ಸಮಸ್ಯೆಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಕುರಿತು ಸಂಜೆವಾಣಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದರು.
ದಕ್ಷಿಣ ಕಾಶಿ ನಂದಿ ಗ್ರಾಮದ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯ ಪುರತತ್ವ ಇಲಾಖೆ ಅರಕಲಜಿಕಲ್ ಡಿಪಾರ್ಟ್ಮೆಂಟ್ ಗೆ ಸೇರಿರುವ ಕಾರಣ ನೇರವಾಗಿ ಈ ದೇವಾಲಯದ ಅಭಿವೃದ್ಧಿಯನ್ನು ಇಲಾಖೆಯ ಅನುಮತಿ ಇಲ್ಲದೆ ಮಾಡುವುದಕ್ಕೆ ಆಗುವುದಿಲ್ಲ . ಆದಕಾರಣ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಈ ದೇವಾಲಯವನ್ನು ವಾಸ್ತುಶಿಲ್ಪಕ್ಕೆ ಕಿಂಚಿತ್ತು ದಕ್ಕೆ ತರದಂತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನಿನ್ನೆ ಅಷ್ಟೇ ಸಂಜೆವಾಣಿ ಪತ್ರಿಕೆಯಲ್ಲಿ ಶ್ರೀ ಭೋಗ ನಂದೀಶ್ವರ ಸ್ವಾಮಿ ದೇವಾಲಯದಲ್ಲಿನ ಅವ್ಯವಸ್ಥೆಗಳ ಬಗ್ಗೆ ಸುದ್ದಿ ಒಂದು ಪ್ರಕಟಗೊಂಡಿದ್ದು ಜಿಲ್ಲಾಧಿಕಾರಿಗಳು ಸಹ ಅತ್ಯಂತ ಶೀಘ್ರವಾಗಿ ಈ ಸಮಸ್ಯೆ ನಿವಾರಣೆಗೆ ಪೂರಕ ಪ್ರತಿಕ್ರಿಯೆ ನೀಡಿದ್ದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಯಿತು.



























