
ಧಾರವಾಡ,ಜೂ4: ಬಡತನದ ಕಾರಣದಿಂದ ವಿವಿಧ ಗ್ರಾಮಗಳಲ್ಲಿ ಗಾಯರಾಣಾ ಸೇರಿದಂತೆ ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸುವ ಭಾಗವಾಗಿ ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಹಂತ ಹಂತವಾಗಿ 1588 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಹೇಳಿದರು.
ಇಲ್ಲಿಗೆ ಸಮೀಪದ ಕಿತ್ತೂರಿನಲ್ಲಿ ಸೋಮವಾರ ಹೆಬ್ಬಳ್ಳಿ, ಕಲ್ಲೂರು, ಮರೆವಾಡ ಹಾಗೂ ವೆಂಕಟಾಪೂರ ಗ್ರಾಮಗಳ 300 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ಮನೆ ನಿರ್ಮಿಸಿಕೊಂಡವರಿಗೆ ಅಧಿಕೃತವಾಗಿ ದಾಖಲೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ರಾಜ್ಯ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ತಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಆಸಕ್ತಿಯಿಂದ ರಾಜ್ಯಾದ್ಯಂತ ಅಕ್ರಮ ಮನೆಗಳನ್ನು ಸಕ್ರಮಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ 1.11 ಲಕ್ಷ ಕುಟುಂಬಗಳಿಗೆ ಅವರ ಮನೆಯ ಇ-ಸ್ವತ್ತು ಸೇರಿದಂತೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದರು.
ಶಾಲೆ, ಹಾಸ್ಟೇಲ್‍ನಲ್ಲಿ ಸ್ಥಳೀಯರಿಗೆ ಆದ್ಯತೆ.
ಮೊರಾರ್ಜಿ ಸೇರಿದಂತೆ ಸ್ಥಳೀಯವಾಗಿರುವ ವಸತಿಯುತ ಶಾಲೆಗಳಲ್ಲಿ ಸ್ಥಳೀಯ ಮಕ್ಕಳಿಗೆ ಅವಕಾಶ ಇಲ್ಲದಾಗಿತ್ತು. ಈ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆದ ಪರಿಣಾಮವಾಗಿ ಶೇ. 75ರಷ್ಟು ಮಕ್ಕಳಿಗೆ ಪ್ರವೇಶ ಹಾಗೂ ಹೊರಗಿನ ಮಕ್ಕಳಿಗೆ ಶೇ. 25ರಷ್ಟು ಪ್ರವೇಶ ನೀಡುವ ನೀತಿ ರೂಪಿಸಲಾಗಿದೆ. ಇದೇ ರೀತಿ ವಸತಿ ನಿಲಯದಲ್ಲೂ ಸ್ಥಳೀಯವಾಗಿ ಶೇ.75ರಷ್ಟು ಆದ್ಯತೆ ನೀಡಲಾಗಿದೆ ಎಂದರು.
ಅಕ್ರಮ ಸಕ್ರಮ ಯೋಜನೆ ಅಡಿ ಶಾಸಕ ವಿನಯ ಕುಲಕರ್ಣಿ ಅವರು 300 ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಮಹಾನಗರ ಪಾಲಿಕೆ ಹಾಗೂ ದೇವರಾಜ ಅರಸು ನಿಗಮದಿಂದ ಧಾರವಾಡ 2 ಮತ್ತು 4ನೇ ವಾರ್ಡ್‍ನ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪಟಾಪ್ ವಿತರಣೆ ಮಾಡಿದರು.
ತಾಲೂಕು ಗ್ಯಾರಂಟಿ ಅಧ್ಯಕ್ಷ ಅರವಿಂದ ಏಗನಗೌಡರ, ಪಾಲಿಕೆ ವಿಪಕ್ಷ ನಾಯಕ ರಾಜಶೇಖರ ಕಮತಿ, ಪ್ರಕಾಶ ಘಾಟಗೆ, ಚನ್ನಬಸಪ್ಪ ಮಟ್ಟಿ, ವಿಠ್ಠಲ ಭೋವಿ, ಸುರವ್ವ ಪಾಟೀಲ, ಸಿದ್ಧರಾಮ ದಂಡಿನ, ಇಸ್ಮಾಯಿಲ್ ಸಾಯದನವರ, ಶಂಕುಂತಲಾ ಬಂಗಿ ಹಾಗೂ ತಹಶೀಲ್ದಾರ ಡಿ.ಎಚ್. ಹೂಗಾರ, ತಾಲೂಕು ಅಧಿಕಾರಿ ಗಂಗಾಧರ ಕಂದಕೂರ ಇದ್ದರು.