Home ಜಿಲ್ಲೆ ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಿ

ಮಾದಕ ವ್ಯಸನದಿಂದ ದೂರವಿದ್ದು ಆರೋಗ್ಯಕರ ಜೀವನ ನಡೆಸಿ

ಬೀದರ, ಸೆ.೨೯: ಯುವಜನರು ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಆರೋಗ್ಯ ತಜ್ಞರು ಕರೆ ನೀಡಿದರು.

ಗುರು ನಾನಕ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ಭಾರತ ಸರ್ಕಾರದ ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಾಲಯ ಹಾಗೂ ಮೈ ಭಾರತ್ (ಒಙ ಃhಚಿಡಿಚಿಣ) ಮಾರ್ಗದರ್ಶನದಲ್ಲಿ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ’ ೧೦೦ ವಾರಗಳ ನಶಾ ಮುಕ್ತ ಯುವ ಅಭಿಯಾನದ ಅಂಗವಾಗಿ ‘ಮೇರಾ ಸ್ವಾಸ್ಥ್ಯ, ಮೇರಾ ಗರ್ವ್’ ಆರೋಗ್ಯ ಮತ್ತು ಅರಿವು ಶಿಬಿರವನ್ನು ನಗರದ ಗುರು ನಾನಕ್ ಆಸ್ಪತ್ರೆಯಲ್ಲಿ ಸೆ.೨೫ರಂದು ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಗುರು ನಾನಕ್ ಆಸ್ಪತ್ರೆಯ ಸಿಇಒ ಕಾಮೇಶ್ವರ ರಾವ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಗುರು ನಾನಕ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಶ್ಯಾಮಲಾ ವಿ. ದತ್ತ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸಂದೀಪ್ ಹಾಗೂ ಗೈನಕಾಲಜಿಸ್ಟ್ ಡಾ. ಸಂತೋಷ್ ಅವರು ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ ಪದ್ಧತಿ, ಸೂಕ್ತ ಪೋಷಕಾಂಶಗಳ ಸೇವನೆ, ಜೀರ್ಣಾಂಗಗಳ ಆರೋಗ್ಯ, ಸಾಮಾನ್ಯ ಆರೋಗ್ಯ ನಿರ್ವಹಣೆ ಹಾಗೂ ರೋಗನಿರೋಧಕ ಜೀವನಶೈಲಿಯ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ಮೂಲಭೂತ ಆರೋಗ್ಯ ತಪಾಸಣೆ ನಡೆಸಲಾಯಿತು. ವೈದ್ಯಕೀಯ ಸಿಬ್ಬಂದಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಅಗತ್ಯ ಆರೋಗ್ಯ ಪರೀಕ್ಷೆಗಳನ್ನು ಕೈಗೊಂಡರು.

ಎನ್‌ಎಸ್‌ಎಸ್ ಯೋಜನಾಧಿಕಾರಿ ಜಿ.ಎನ್. ಮಠಪತಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.