ಬಂಜಾರ ಸಮಾಜಕ್ಕೆ ಅನ್ಯಾಯವಾದರೇ ರಾಜ್ಯಾದ್ಯಂತ ಹೋರಾಟ: ರಮೇಶ ಕಾರಬಾರಿ ಎಚ್ಚರಿಕೆ

ವಾಡಿ:ಜೂ.೩೦:ರಾಜ್ಯದಲ್ಲಿ ಬಂಜಾರ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ತೀರ ಹಿಂದುಳಿದಿದೆ. ಈ ಸಮುದಾಯಕ್ಕೆ ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿಯಲ್ಲಿ ಶೇ.೬ ರಷ್ಟು ಒಳಮೀಸಲಾತಿ ನೀಡಬೇಕು ಎಂದು ಬಂಜಾರ(ಲAಬಾಣಿ) ಸೇವಾ ಸಂಘದ ವಾಡಿ ಘಟಕದ ಅಧ್ಯಕ್ಷ ರಮೇಶ ಕಾರಬಾರಿ ಹೇಳಿದರು.

ಪಟ್ಟಣದ ಸೇವಾಲಾಲ್ ನಗರದ ಬಂಜಾರ ಸಮುದಾಯ ಭವನದಲ್ಲಿ ಒಳ ಮೀಸಲಾತಿ ಕುರಿತು ಕರೆದ ಬಂಜಾರ(ಲAಬಾಣಿ) ಸೇವಾ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಬಂಜಾರ ಸಮುದಾಯ ಮನುಷ್ಯನ ಉಗಮದಿಂದಲೇ ಸಮಾಜದಿಂದ ಬೇರ್ಪಟ್ಟು, ಗುಡ್ಡಗಾಡು ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈ ಸಮುದಾಯಕ್ಕೆ ಇಲ್ಲಿಯವರೆಗೆ ಸಂವಿಧಾನಾತ್ಮಕವಾಗಿ ಜನಸಂಖ್ಯೆ ಅನುಗುಣವಾಗಿ ನ್ಯಾಯ ಸಿಕ್ಕಿಲ್ಲ.

ಪ್ರಸ್ತುತ ಬಂಜಾರ ಸಮುದಾಯ ಉದ್ಯೋಗ ಅರಿಸಿ ಪುಣೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ. ಪರಿಣಾಮ ರಾಜ್ಯ ಸರಕಾರ ಜಾರಿ ಮಾಡಿದ ಒಳ ಮೀಸಲಾತಿ ಸಮೀಕ್ಷೆ ಕಾರ್ಯದಿಂದಲೇ ಬಂಜಾರ ಸಮುದಾಯದ ಶೇ.೮೦ ರಷ್ಟು ಜನರು ಹೊರಗೆ ಉಳಿಯಲಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಅವರಿಗೆ ವಿಶೇಷ ಸಮೀಕ್ಷೆ ನಡೆಸಬೇಕು ಎಂದು ಪೋಮು ರಾಠೋಡ
ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಕಳೆದ ಬಿಜೆಪಿ ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಬಂಜಾರ, ಬೋವಿ, ಕೊರಚ್ ಸಮುದಾಯ ಸೇರಿದಂತೆ ವಿವಿಧ ಜಾತಿಗಳಿಗೆ ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿಯಲ್ಲಿ ಶೇ.೪.೫ ರಷ್ಟು ಮೀಸಲಾತಿ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ವರದಿ ಸಲ್ಲಿಸಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಬಂಜಾರ ಸಮುದಾಯ ಸುಮಾರು ೨೨ ಲಕ್ಷ ಜನ ಸಂಖ್ಯೆ ಹೊಂದಿದೆ.

ರಾಜ್ಯ ಸರಕಾರ ನಡೆಸುತ್ತಿರುವ ಪರಿಶಿಷ್ಟ ಜಾತಿಯೊಳಗಿನ ಒಳ ಮೀಸಲಾತಿ ಸಮೀಕ್ಷೆ ಕಾರ್ಯ ಸಂಪೂರ್ಣ ಅವೈಜ್ಞಾನಿಕವಾಗಿದೆ. ಸಮೀಕ್ಷೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಬಂಜಾರ ಸಮುದಾಯ ವಾಸ ಮಾಡುವ ತಾಂಡಾದಲ್ಲಿ ಸರ್ವರ್ ಸಮಸ್ಯೆಯಿಂದ ಸಮೀಕ್ಷೆ ಕಾರ್ಯ ಪೂರ್ಣ ಪ್ರಮಾಣದಲ್ಲಿ ಆಗಿರುವುದಿಲ್ಲ. ಇದರಿಂದ ೬ ತಿಂಗಳ ವರೆಗೆ ಸಮೀಕ್ಷೆ ಕಾರ್ಯ ಅವಧಿ ವಿಸ್ತರಿಸಬೇಕು.

ಪರಿಶಿಷ್ಟ ಜಾತಿಗಳೊಳಗೆ ಇರುವ ಹಿಂದುಳಿದಿರುವಿಕೆಯನ್ನು ನಿವಾರಿಸಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವು ಪೂರ್ಣ ಪ್ರಮಾಣದ ಸಮೀಕ್ಷೆ ಕಾರ್ಯದ ವರದಿ ಸಲ್ಲಿಸಿದ ನಂತರ ಜನ ಸಂಖ್ಯೆ ಅನುಗುಣವಾಗಿ ಬಂಜಾರ ಸಮುದಾಯಕ್ಕೆ ಶೇ.೬ ರಷ್ಟು ಒಳ ಮೀಸಲಾತಿ ಜಾರಿಯಾಗಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

ಬಂಜಾರ(ಲAಬಾಣಿ) ಸೇವಾ ಸಂಘದ ವಾಡಿ ಘಟಕದ ಅಧ್ಯಕ್ಷ ರಮೇಶ ಕಾರಬಾರಿ, ಪೊಮು ರಾಠೋಡ, ವಿಠ್ಠಲ ನಾಯಕ, ರಾಮ್ ರಾಮಚಂದ್ರ ರಾಠೋಡ, ತುಕಾರಾಮ್ ರಾಠೋಡ, ಸುರೇಶ್ ರಾಠೋಡ, ಈಶ್ವರ ರಾಠೋಡ, ಸೋಮಸಿಂಗ್ ರಾಠೋಡ, ಸೋಮು ಚವಾಣ್, ಪುರು ಬೆಳಗೇರಾ, ಮೇಘನಾಥ್ ಯಾಗಾಪುರ, ಹರಿಸಿಂಗ್ ಕಮರವಾಡಿ, ಕಿಶನ್ ಜಾಧವ, ಅಂಬಾಧಾಸ ಜಾಧವ, ರವಿ ಸಿಕೆ ಜಾಧವ ಡಾ.ಮೋಹನ್ ಪವಾರ್ ಇದ್ದರು.