ಕಲಬುರಗಿ: ಸೆ,24:2025-26ನೇ ಸಾಲಿಗೆ ವಿಶ್ವಕೌಶಲ್ಯ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದ್ದು, ಇದರ ಪೂರ್ವಸಿದ್ಧತೆ ಭಾಗವಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (ಕೆ.ಎಸ್.ಡಿ.ಸಿ.) ದಿಂದ “ಕರ್ನಾಟಕ ರಾಜ್ಯ ಕೌಶಲ್ಯ ಓಲಂಪಿಕ್ಸ್ ಸ್ಪರ್ಧಾ” ಕಾರ್ಯಕ್ರಮವನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಕೈಗೊಳ್ಳಲು ಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು 2025ರ ಸೆಪ್ಟೆಂಬರ್ 30 ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಯುವಜನತೆಯ ಜ್ಞಾನಾರ್ಜನೆಗೆ ಸೂಕ್ತ ವೇದಿಕೆ ಕಲ್ಪಿಸಲು ಹಾಗೂ ಮಾದರಿ ಕೌಶಲ್ಯಭರಿತ ರಾಜ್ಯವನ್ನಾಗಿಸಲು 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಓಲಂಪಿಕ್ಸ್
ಸ್ಪರ್ಧಾ ಕಾರ್ಯಕ್ರಮವನ್ನು ಕೈಗೊಳ್ಳಲು ಯೋಜಿಸಲಾಗಿದೆ. ವಿವಿಧ ವಿಭಾಗಗಳಲ್ಲಿ 63 ಕೌಶಲ್ಯಗಳಲ್ಲಿ ಯಾವುದೇ ಬೇಕರಿ, ಪ್ಲಂಬಿಂಗ್‍ಯಿಂದ ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿಂಗ್‍ಗಳಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸಬಹುದಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಆಯ್ಕೆಯಾದ ಯುವಜನತೆಯ ಕೌಶಲ್ಯವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಶ್ವಕೌಶಲ್ಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಾಗುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು www.skillindiadigital.gov.in http://www.skillindiadigital.gov.in ವೆಬ್‍ಪೋರ್ಟಲ್‍ನಲ್ಲಿ 2025ರ ಸೆಪ್ಟೆಂಬರ್ 30ರೊಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
ಪೋಸ್ಟರ್ ಬಿಡುಗಡೆ: ವಿಶ್ವ ಕೌಶಲ್ಯ ಸ್ಪರ್ಧೇಯಲ್ಲಿ ಜಿಲ್ಲೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು ಭಾಗವಹಿಸುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ (ಸ್ಪರ್ಧೆಯ ವಿವರವುಳ್ಳ) ಪೋಸ್ಟರ್‍ನ್ನು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಕೌಶಲ್ಯಾಭಿವೃದ್ಧಿಕಾರಿ ನಾಗುಬಾಯಿ ಸೂರ್ಯವಂಶಿ ಅವರು ಉಪಸ್ಥಿತರಿದ್ದರು.
























