
ಕೋಲಾರ,ಜೂ,೨- ಕುರುಡುತನ ದೌರ್ಬಲ್ಯವಲ್ಲ, ವರ ಎಂದು ಭಾವಿಸಿ, ಅಂತರ್ಗಣ್ಣಿನಿಂದ ಮನಸಿನ ಅಮೂರ್ತ ಭಾವನೆಗಳನ್ನು ಗ್ರಹಿಸಿ. ಕತ್ತಲ ಲೋಕದ ಕನಸುಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಪಡಿಸಿ, ಕಣ್ಣಿದ್ದವರ ಕಣ್ಣು ತೆರೆಸಿ ಶ್ರೇಷ್ಠ ಕವಿಗಳಾಗಿ ಎಂದು ಸಂಸ್ಕೃತಿ ಚಿಂತಕ ಕವಿ ಲಕ್ಷ್ಮೀಪತಿ ಕೋಲಾರ ಅಂಧ ಕವಿಗಳಿಗೆ ಹೇಳಿದರು.
ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ದೃಷ್ಠಿ ಚೇತನ ಕಾವ್ಯಯಾನ – ೫ ರಾಜ್ಯ ಮಟ್ಟದ ಅಂಧರ ವಿಶೇಷ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಭೌತಿಕ ಜಗತ್ತನ್ನು ಎಂದಿಗೂ ಕಾಣದ ಸೃಜನಶೀಲ ಮನಸುಗಳು ಹೇಗೆ ಕಾವ್ಯ ರಚಿಸಬಹುದು ಎಂಬ ಕುತೂಹಲ ತಮಗಿತ್ತು, ಕವಿಗೋಷ್ಠಿ ಆಲಿಸಿದ ನಂತರ ಅಂಧ ಕವಿಗಳು ಶಬ್ದಗಳ ಮೂಲಕ ಜಗತ್ತನ್ನು ಗ್ರಹಿಸುತ್ತಿದ್ದಾರೆಂಬುದು ಅರ್ಥವಾಯಿತು ಎಂದರು.
ಅಂಧ ಕವಿಗಳು ಕಿವಿಯಿಂದ ಕೇಳುವ ರುಚಿಗೆಟ್ಟ ಹಾಗೂ ರೂಢಿಗೆಟ್ಟ ಭ್ರಷ್ಟಗೊಂಡಿರುವ ಪದಜಾಲಗಳನ್ನು ಅನುಸರಿಸಲು ಹೋಗದೆ ಅನರ್ಘ್ಯವಾಗಿರುವ ಜಗತ್ತಿನ ಅನನ್ಯ ಅನುಭವಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಗೊಳಿಸಿದರೆ ಅದ್ಙುತ ಕಾವ್ಯ ಸೃಷ್ಟಿಯಾಗಲಿದೆ ಎಂದು ಸಲಹೆ ನೀಡಿದರು.
ಕತ್ತಲು ಎನ್ನುವುದು ಅಜ್ಞಾನ, ಬೆಳಕು ಎನ್ನುವುದು ಜ್ಞಾನ ಎಂಬ ಹಸೀ ಸುಳ್ಳನ್ನು ನಂಬದಿರಿ ಎಂದ ಅವರು, ಜಗತ್ತಿನ ಶೇ.೯೬ ರಷ್ಟು ಜ್ಞಾನ ಅಡಗಿರುವುದೇ ಕತ್ತಲಿನಲ್ಲಿ ಎನ್ನುವುದು ವಾಸ್ತವ, ಕವಿಗಳ ಲೋಕ ಶಿಶು ಕಂಡ ಕನಸಿನಂತಿರಬೇಕು, ಅದ್ಭುತವಾಗಿರುವ ಕತ್ತಲ ಜಗತ್ತನ್ನು ಅಂಧ ಕವಿಗಳು ಸದುಪಯೋಗಿಸಿಕೊಂಡು ಕಾವ್ಯ ರಚನೆ ಮಾಡಬೇಕೆಂದು ಕಿವಿ ಮಾತು ಹೇಳಿದರು.
ಕವಿಗೋಷ್ಠಿಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಸಾಹಿತಿ ವಿಮರ್ಶಕ ಪ್ರೊ.ಚಂದ್ರಶೇಖರ ನಂಗಲಿ ಮಾತನಾಡಿ, ಪಂಪನಿಂದ ಆರಂಭವಾದ ಕನ್ನಡ ಸಾಹಿತ್ಯ ಪರಂಪರೆಯು ಒಂದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ, ಕುವೆಂಪು ಹೇಳಿದಂತೆ ಮನಸಿಗೆ ಮೇವು, ಒಡಲಿಗೆ ಕಾವು ಆಗುವ ವಿಚಾರಗಳಿಂದ ಮಾತ್ರವೇ ವ್ಯಕ್ತಿತ್ವ ರೂಪುಗೊಳ್ಳುತ್ತದೆ, ಅಂಧ ಕವಿಗಳು ಧರ್ಮದ ಸ್ವರೂಪವನ್ನು ಸರಿಯಾಗಿ ಗ್ರಹಿಸಿ ಸಾಹಿತ್ಯ ರಚನೆ ಮಾಡಬೇಕು ಎಂದರು.
ಕೊಂಡರಾಜನಹಳ್ಳಿ ಮಂಜುಳಾರಿಂದ ಗೀತೆ ಗಾಯನ, ಕವಿ ನ.ಗುರುಮೂರ್ತಿ ಸ್ವಾಗತಿಸಿ ನಿರೂಪಿಸಿ, ನಾಟಕಕಾರ ನಾವೆಂಕಿ ವಂದಿಸಿದರು.





























