ಕೋಲಾರದಲ್ಲಿ ರಾಜ್ಯ ಮಟ್ಟದ ನರ್ಸ್‌ಗಳ ಕ್ರೀಡಾಕೂಟಕ್ಕೆ ಚಾಲನೆ

ಕೋಲಾರ,ಸೆ,೧೮- ಒತ್ತಡ ಹಾಗೂ ಬೊಜ್ಜು ನಿವಾರಣೆಗೆ ಪ್ರತಿ ನಿತ್ಯವೂ ೩೦ ರಿಂದ ೪೫ ನಿಮಿಷಗಳ ಕಾಲ ಯೋಗ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ದೇವರಾಜ ಅರಸು ವೈದ್ಯಕೀಯ ಸಂಸ್ಥೆಯ ಉಪ ಕುಲಪತಿ ಡಾ.ಬಿ.ವೆಂಗಮ್ಮ ಹೇಳಿದರು.


ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣ ದಲ್ಲಿ ಬುಧವಾರ ರಾಜ್ಯ ಮಟ್ಟದ ನರ್ಸಿಂಗ್ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಧ್ವಜಾರೋಹಣ ನೆರವೇರಿಸಿ, ಕ್ರೀಡಾ ಜ್ಯೋತಿ ಸ್ಪೀಕರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.


ನಿಯಮಿತವಾಗಿ ಕ್ರೀಡಾ ಹಾಗೂ ವ್ಯಾಯಾಮ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ರಕ್ತದೊತ್ತಡ, ಮಧುಮೇಹ ಇತ್ಯಾದಿ ಕಾಯಿಲೆಗಳಿಂದ ದೂರವಿರಬಹುದು ಎಂದು ಹೇಳಿದ ಅವರು, ನರ್ಸಿಂಗ್ ವಿದ್ಯಾರ್ಥಿಗಳು ವೃತ್ತಿ ಒತ್ತಡದಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಒತ್ತು ನೀಡಬೇಕೆಂದು ಸಲಹೆ ನೀಡಿದರು.


ಅರಸು ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆಯ ಕುಲ ಸಚಿವ ಡಾ.ಸಿ.ಮುನಿನಾರಾಯಣ ಮಾತನಾಡಿ, ಇದೇ ಮೊದಲ ಬಾರಿಗೆ ದೇವರಾಜ ಅರಸು ನರ್ಸಿಂಗ್ ಕಾಲೇಜು ಸಹಯೋಗದಲ್ಲಿ ರಾಜ್ಯ ನರ್ಸಿಂಗ್ ಸಂಘವು ಕೋಲಾರ ನಗರದಲ್ಲಿ ರಾಜ್ಯ ಮಟ್ಟದ ನರ್ಸಿಂಗ್ ಕ್ರೀಡಾಕೂಟ ಆಯೋಜಿಸಲು ಮುಂದಾಗಿರುವುದು ಶ್ಲಾಘನೀಯ, ಕ್ರೀಡೆಗಳು ಶೈಕ್ಷಣಿಕ ಸಾಧನೆಯ ಜೊತೆಗಿನ ಭಾಗವಾಗಿರಲಿ ಎಂದು ಆಶಿಸಿದರು.


ಜಿಲ್ಲಾ ಯುವಜನ ಕ್ರೀಡಾ ಸಬಲೀಕರಣ ಇಲಾಖೆಯ ಉಪ ನಿರ್ದೇಶಕಿ ಆರ್.ಗೀತಾ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರವೇ ಒತ್ತು ನೀಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ, ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿ ಸೆಣಸಾಡಬೇಕಾದರೆ ಶೈಕ್ಷಣಿಕ ಆರ್ಹತೆ ಜೊತೆಗೆ ಸದೃಢ ಆರೋಗ್ಯವು ಮುಖ್ಯವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.


ರಾಜ್ಯ ಸರಕಾರವು ಕ್ರೀಡಾ ಸಾಧಕರಿಗೆ ವಿವಿಧ ಹುದ್ದೆಗಳಲ್ಲಿ ಶೇ.೩ ಮೀಸಲಾತಿ ಹಾಗೆಯೇ ಕೇಂದ್ರ ಸರಕಾರವು ಕ್ರೀಡೆಗೆ ಪ್ರೋತ್ಸಾಹದಾಯಕ ಯೋಜನೆಗಳನ್ನು ಪ್ರಕಟಿಸುತ್ತಿದೆ, ಇವುಗಳನ್ನು ಯುವ ಕ್ರೀಡಾಪಟುಗಳು ಸದ್ಬಳಕೆ ಮಾಡಿಕೊಂಡು ವೃತ್ತಿ ಜೀವನವನ್ನು ಕ್ರೀಡೆಗಳ ಮೂಲಕವೇ ಕಟ್ಟಿಕೊಳ್ಳಬಹುದಾಗಿದೆ ಎಂದರು.


ವೇದಿಕೆ ಮೇಲೆ ದೇವರಾಜ ಅರಸು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ವಿಜಯಲಕ್ಷ್ಮಿ, ಉಪ ಪ್ರಾಂಶುಪಾಲೆ ಲಾವಣ್ಯ ಸುಭಾಷಿನಿ, ಪ್ರೊಫೆಸರ್ ಜೈರಾಕಿನಿ ಅರುಣ, ರಾಜ್ಯ ನರ್ಸಿಂಗ್ ಸಂಘದ ಸಲಹೆಗಾರರಾದ ಡಾ.ಆರ್.ವಾಣಿ, ಡಾ.ರಮ್ಯ ಉಪಸ್ಥಿತರಿದ್ದರು.


ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ನರ್ಸಿಂಗ್ ಕಾಲೇಜುಗಳಿಂದ ೧೫ ಕ್ಕೂ ಹೆಚ್ಚು ತಂಡಗಳು ಆಗಮಿಸಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹ ದಿಂದ ಭಾಗವಹಿಸಿದ್ದವು. ನರ್ಸಿಂಗ್ ವಿದ್ಯಾರ್ಥಿನಿಯರಾದ ನಂದಿನಿ, ಅರ್ಪಿತಾ ನಿರೂಪಿಸಿ, ಜೆಸ್ಸಿಂತಾ ತಂಡ ಪ್ರಾರ್ಥಿಸಿ, ನಾಗರತ್ನ ವಂದಿಸಿದರು.


ಹಿಂದಿನ ರಾಜ್ಯ ಮಟ್ಟದ ನರ್ಸಿಂಗ್ ಕ್ರೀಡಾಕೂಟದ ವಿಜೇತ ಕ್ರೀಡಾಪಟುಗಳು ಕ್ರೀಡಾಜ್ಯೋತಿಯನ್ನು ಹೊತ್ತು ತಂದು ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನರ್ಸಿಂಗ್ ಕ್ರೀಡಾ ತಂಡಗಳ ಆಕರ್ಷಕ ಪಥ ಸಂಚಲನ ನಡೆಯಿತು.