
ಬೀದರ, ಮಾ. 2:ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಬೀದರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಪರಮ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳ ಕೃಪಾಶೀರ್ವಾದ ಪ್ರಯುಕ್ತ ಲಿಂ. ಪಂ. ಪಂಚಾಕ್ಷರ ಗವಾಯಿ ಅವರ 81ನೇ ಪುಣ್ಯತಿಥಿ, ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿ ಅವರ 15ನೇ ಪುಣ್ಯತಿಥಿ ಹಾಗೂ ಸಂಘದ 23ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸಂಗೀತ ಸಮ್ಮೇಳನ, ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮವನ್ನು ಮಾರ್ಚ್ 6ರಂದು ಶುಕ್ರವಾರ ಡಾ. ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು,
ಸಮ್ಮೇಳನದ ಕಾರ್ಯಕ್ರಮ ವಿವರ
ಮಾರ್ಚ್ 6ರಂದು ಬೆಳಿಗ್ಗೆ 11 ಗಂಟೆಗೆ ಸಮ್ಮೇಳನ ಸರ್ವಾಧ್ಯಕ್ಷರ ಸ್ವಾಗತ ನಡೆಯಲಿದೆ. 2025-26ನೇ ಸಾಲಿನ ಸಮ್ಮೇಳನ ಸರ್ವಾಧ್ಯಕ್ಷರಾಗಿ ಭಾಲ್ಕಿಯ ಹಿರಿಯ ಸಂಗೀತಗಾರ ಹಾಗೂ ಸಂಗೀತ ಶಿಕ್ಷಕರಾದ ಪೆÇ್ರ. ಎಸ್.ಕೆ. ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ. ಬೆಳಿಗ್ಗೆ 11.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಪೆÇ್ರ. ಕೆ.ಸಿ. ವೀರಣ್ಣ ಕುಲಪತಿಗಳು ಜ್ಯೋತಿ ಬೆಳಗಿಸುವರು. ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಪೆÇ್ರ. ಎಸ್.ವಿ. ಕಲ್ಮಠ ರಚಿತ “ಕುಮಾರ ಕೃಪಾ ಕೊವಿಡ ಗೆದ್ದವರ ಕೈತೋಟ ಕೈಪಿಡಿ” ಕೃತಿ ಬಿಡುಗಡೆಗೊಳ್ಳಲಿದೆ.
ಮಧ್ಯಾಹ್ನ 2ರಿಂದ ಸಂಜೆ 6ರ ವರೆಗೆ ರಾಜ್ಯ ಮಟ್ಟದ ಸಂಗೀತ ಸಮ್ಮೇಳನ ನಡೆಯಲಿದ್ದು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭಜನಾ ಸಂಗೀತ ಹಾಗೂ ಭರತನಾಟ್ಯ ಕಾರ್ಯಕ್ರಮಗಳು ಜರುಗಲಿವೆ. ಪಂ. ರಾಮಲು ಗಾದಗಿ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಲಿದ್ದಾರೆ. ಎಂದರು.
ಪ್ರಶಸ್ತಿ ಪ್ರದಾನ
ಸಂಜೆ 6ರಿಂದ 7ರ ವರೆಗೆ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. 2025-26ರ ಪಂಚಾಕ್ಷರ ಪ್ರಶಸ್ತಿಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಖ್ಯಾತ ತಬಲಾ ವಾದಕರಾದ ಮಡಿವಾಳಯ್ಯ ಸಾಲಿ ಅವರಿಗೆ ಹಾಗೂ ಪುಟ್ಟರಾಜ ಪ್ರಶಸ್ತಿಯನ್ನು ಅಂಧ ಕಲಾವಿದ ಶ್ರೀ ಏಕನಾಥ ಸಿದ್ದಸುರೆ ಅವರಿಗೆ ಪ್ರದಾನ ಮಾಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ನಡೆಯಲಿದೆ.
ರಾತ್ರಿ 7ರಿಂದ 9ರ ವರೆಗೆ ರಾಜ್ಯ ಮಟ್ಟದ ಕಲಾವಿದರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಂ. ರಾಜೇಂದ್ರಸಿಂಗ್ ಪವಾರ ಅವರಿಂದ ಹಾರ್ಮೋನಿಯಂ ಸೊಲೋ ಹಾಗೂ ಪಂ. ವೆಂಕಟೇಶ ಅಲ್ಕೋಡ ಅವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಚಂದ್ರಶೇಖರ ಹೆಬ್ಬಾಳೆ ಹೇಳಿದರು.
ಸಂಘದ ಗೌರವಾಧ್ಯಕ್ಷ ಪೆÇ್ರ.ಎಸ್.ವಿ ಕಲ್ಮಠ ಮಾತನಾಡಿ, ಗಾನಯೋಗಿ ಪಂಚಾಕ್ಷರ ಗವಾಯಿ ಅವರ ಪುಣ್ಯತಿಥಿಯನ್ನು ಕಳೆದ 40 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದು, 1984ರಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿ ಅವರ ಶಿಷ್ಯರಾದ ದಿವಂಗತ ಪಂ. ಫಕೀರೇಶ ಅಗಡಿ ಅವರ ಮಾರ್ಗದರ್ಶನದಲ್ಲಿ ಚಿಟಗುಪ್ಪದಲ್ಲಿ 41ನೇ ಪುಣ್ಯತಿಥಿ ಆಚರಿಸಲಾಯಿತು. ಬಳಿಕ ಸಂಘವನ್ನು ನೋಂದಾಯಿಸಿ 2002-03ರಿಂದ ಪ್ರತಿವರ್ಷ ಪುಣ್ಯತಿಥಿ ಅಂಗವಾಗಿ ರಾಜ್ಯ ಮಟ್ಟದ ಸಂಗೀತ ಸಮ್ಮೇಳನಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಸಂಘವು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ನೂರಾರು ಕಲಾವಿದರನ್ನು ಬೀದರಿಗೆ ಆಹ್ವಾನಿಸಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸಂಗೀತ, ನೃತ್ಯ, ಸಾಹಿತ್ಯ, ವಿಜ್ಞಾನ ಹಾಗೂ ಪರಿಸರ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದೆ. ಜಿಲ್ಲಾ ಮಟ್ಟದ ಸಂಗೀತ ಸಮ್ಮೇಳನಗಳು, ಮನೆಗೊಂದು ಸಂಗೀತ, ವಿಶ್ವ ಸಂಗೀತ ದಿನಾಚರಣೆ, ಶಾಲಾ-ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದಾನಿ ಬಾಬುರಾವ, ಉಪಾಧ್ಯಕ್ಷರಾದ ರಾಜೇಂದ್ರಸಿಂಗ ಪವಾರ, ಖಜಾಂಚಿ ಡಾ.ಬಿ.ಎಸ್ ಬಿರಾದಾರ, ರಾಜೇಂದ್ರ ಬಿರಾದಾರ, ಉದ್ಯಮಿ ಜಯರಾಜ ಖಂಡ್ರೆ, ಪ್ರಮುಖರಾದ ಪುಂಡಲಿಕರಾವ ಪಾಟೀಲ, ಕಂಟೆಪ್ಪ ಗಂದಿಗುಡೆ, ಸುರೇಶ ಮಾಶೆಟ್ಟಿ, ವೀರಭದ್ರಪ್ಪ ಉಪ್ಪಿನ್ ಹಾಗೂ ಇತರರು ಉಪಸ್ಥಿತರಿದ್ದರು.



























