ಹುಳಿಯಾರು, ಆ. ೯- ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಸಮರ್ಪಕ ಗೊಬ್ಬರ ನೀಡದೆ ಕೇಂದ್ರದ ಮೇಲೆ ರಾಜ್ಯ, ರಾಜ್ಯದ ಮೇಲೆ ಕೇಂದ್ರ ದೂರುತ್ತಾ ಕಾಲಹರಣ ಮಾಡುತ್ತಿದ್ದು, ಈ ಕಪಟ ನಾಟಕಗಳನ್ನು ಬಿಟ್ಟು ರೈತರಿಗೆ ಗೊಬ್ಬರ ಕೊಡಿ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಒತ್ತಾಯಿಸಿದ್ದಾರೆ.
ಹುಳಿಯಾರು ವಾಲ್ಮೀಕಿ ಸರ್ಕಲ್‌ನಲ್ಲಿನ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಹೋಬಳಿ ರೈತ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈತ ಕುಲದ ಉದ್ದಾರಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು, ಸಾವಿರಾರು ಅಧಿಕಾರಿಗಳು ಇರ್‍ತಾರೆ. ಇವರೆಲ್ಲರಿಗೂ ಜನರ ತೆರಿಗೆಯಿಂದ ಕೋಟ್ಯಾಂತರ ರೂ. ಸಂಬಳ ಕೊಡಲಾಗುತ್ತಿದೆ. ಇಷ್ಟೆಲ್ಲಾ ವ್ಯವಸ್ಥೆ ಇದ್ದರೂ ಮಳೆ ಬಿದ್ದ ಸಂದರ್ಭದಲ್ಲಿ ಕನಿಷ್ಟ ಗೊಬ್ಬರ ಕೊಡದಿದ್ದ ಮೇಲೆ ನಿಮ್ಮಗಳ ಅಗತ್ಯ ಏನಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ರೈತರಲ್ಲಿ ಒಗ್ಗಟ್ಟು ಇಲ್ಲದಿರುವುದರ ಪರಿಣಾಮ ರೈತರನ್ನು ಸರ್ಕಾರಗಳು ತಾತ್ಸಾರದಿಂದ ಕಾಣುತ್ತಿದ್ದಾರೆ. ರೈತ ಬಿತ್ತುಳುವುದನ್ನು ನಿಲ್ಲಿಸಿದರೆ ದೇಶದ ಜನ ಉಪವಾಸ ಮಲಗಬೇಕಾಗುತ್ತದೆ ಎನ್ನುವ ಕನಿಷ್ಟ ಅರಿವೂ ಇಲ್ಲದೆ ವರ್ತಿಸುತ್ತಿದ್ದಾರೆ. ರೈತರು ದೇಶಕ್ಕೆ ಎಷ್ಟು ಅಗತ್ಯ ಎನ್ನುವುದನ್ನು ಸರ್ಕಾರಗಳಿಗೆ ಮನದಟ್ಟು ಮಾಡಲು ಹಳ್ಳಿಹಳ್ಳಿಯಲ್ಲೂ ರೈತ ಸಂಘ ಸ್ಥಾಪನೆಯಾಗಬೇಕಿದೆ. ಎಷ್ಟೇ ಬಣಗಳಾಗಿದ್ದರೂ ಸಹ ರೈತ ಸಂಕಷ್ಟಕ್ಕೀಡಾದಾಗ ಎಲ್ಲ ಬಣಗಳೂ ಒಂದಾಗಿ ಹೋರಾಟಕ್ಕಿಳಿಯಬೇಕಿದೆ. ಆಗ ಮಾತ್ರ ಈ ದೇಶದಲ್ಲಿ ರೈತನ ಮಾತು ನಡೆಯುತ್ತದೆ ಎಂದರು.
ಪ್ರೊ. ನಂಜುಂಡಸ್ವಾಮಿ ರೈತ ಸಂಘ ಕಟ್ಟದಿದ್ದರೆ ದೇಶದಲ್ಲಿ ರೈತರಿಗೆ ಬಲ ಬರುವುದಿಲ್ಲ. ಅವರ ಹೋರಾಟದಿಂದ ರೈತರಿಗಾದ ಅನುಕೂಲಗಳನ್ನು ತಿಳಿಸಿ ಪ್ರತಿ ಗ್ರಾಮದಲ್ಲಿಯೂ ರೈತ ಸಂಘಗಳನ್ನು ಕಟ್ಟಬೇಕು. ರೈತರು ಸಂಕಷ್ಟಕ್ಕೆ ಸಿಲುಕಿದಾಗ ಮಧ್ಯರಾತ್ರಿ ಪೋನ್ ಮಾಡಿದರೂ ಎದ್ದು ಬರುವ ಬದ್ಧತೆ ಪ್ರದರ್ಶಿಸಬೇಕು. ಸರ್ಕಾರ ಕಛೇರಿಗಳಲ್ಲಿ ರೈತನ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟು ಅವರ ವಿಶ್ವಾಸಗಳಿಸಬೇಕು. ಒಟ್ಟಿನಲ್ಲಿ ರೈತ ಸಂಘವನ್ನು ಚುರುಕಾಗಿಟ್ಟುಕೊಳ್ಳಬೇಕು ಎಂದು ನೂತನ ಕಾರ್ಯಕಾರಿ ಮಂಡಳಿಗೆ ಹೊಸಹಳ್ಳಿ ಚಂದ್ರಣ್ಣ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಕರಿಯಪ್ಪ, ಉಪಾಧ್ಯಕ್ಷ ಶಂಕರಯ್ಯ, ಹುಳಿಯಾರು ಹೋಬಳಿ ಘಟಕದ ಅಧ್ಯಕ್ಷ ಕೆಂಕೆರೆ ಬಸವರಾಜು, ಕಾರ್ಯದರ್ಶಿ ವಳಗೆರೆಹಳ್ಳಿ ಚಂದ್ರಶೇಖರ್, ಪುಟ್ಟಯ್ಯ, ಹೂವಿನ ತಿಮ್ಮಪ್ಪಸ್ವಾಮಿ, ಹನುಮಂತರಾಜು, ನಿಂಗಪ್ಪ, ಪೆದ್ದಾಬೋವಿ, ಸಿ.ಆರ್.ಆಶಾ, ಮೆಕಾನಿಕ್ ಜಗದೀಶ್, ಎಂ.ಶ್ರೀನಿವಾಸ್, ನಿಂಗಪ್ಪ, ನೀರಾ ಈರಣ್ಣ, ಎನ್.ಜಿ.ರೇವಣ್ಣ, ಕುಮಾರಸ್ವಾಮಿ, ಪುಟ್ಟಿಬಾಯಿ, ನರಸಿಂಹರಾವ್, ಗಂಗಣ್ಣ, ಮಲ್ಲಯ್ಯ, ಪುಟ್ಟಯ್ಯ, ಟಿ.ಎನ್.ಶಿವಣ್ಣ, ಎನ್.ಆರ್.ಗಂಗಣ್ಣ, ಬಸವರಾಜು ಮತ್ತಿತರರು ಭಾಗವಹಿಸಿದ್ದರು.

































