ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ಬೀದರ್:ಮೇ.೨೭: ಕಷ್ಟಪಟ್ಟು ದುಡಿದರೆ ಕೃಷಿ ಅತ್ಯಂತ ಲಾಭದಾಯಕವಿದೆ. ಹೀಗಾಗಿ ಯುವಕರು ಆಸಕ್ತಿ ವಹಿಸಿ ಕೃಷಿಯಲ್ಲಿ ತೊಡಗುವ ಅಗತ್ಯವಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಕರೆ ನೀಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ರೈತ ಸಂಪರ್ಕ ಕೇಂದ್ರದಲ್ಲಿ ರೈತ ಬಾಂಧವರಿಗೆ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮನವಿ ತಿಳಿಸಿದರು.
ರೈತರಿಗೆ ಅವಶ್ಯವಿರುವ ಸೋಯಬೀನ್, ಹೆಸರು, ತೊಗರಿ, ಉದ್ದು ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದ್ದು, ಮುಂಗಾರು ಹಂಗಾಮು ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಕಾರ್ಯ ಪ್ರಾರಂಭವಾಗುವ ಮುನ್ನ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಕ್ಷೇತ್ರದಲ್ಲಿ ಸುಮಾರು ೧೯ ಸಾವಿರ ಕ್ವಿಂಟಾಲ್ ಬೀಜ ಬೇಡಿಕೆಯಿದ್ದು, ೧೦ ಸಾವಿರ ಕ್ವಿಂಟಾಲ್ ದಾಸ್ತಾನಿದೆ. ರೈತರಿಗೆ ಬೇಕಾದ ಸೋಯಾಬೀನ್, ತೊಗರಿ, ಉದ್ದು, ಹೆಸರು ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ರೈತರ ಬೇಡಿಕೆಯಂತೆ ಬೀಜ ವಿತರಣೆ ಮಾಡಲಾಗುವುದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿಬಿತ್ತನೆ ಪ್ರದೇಶ ಗುರಿ೩೪ ಸಾವಿರ ಹೆಕ್ಟೇರ್ ಬಿತ್ತನೆ ಗುರಿ.
ಬೀದರ್ ತಾಲೂಕಿನ ವ್ಯಾಪ್ತಿಯ ನಮ್ಮ ಕೇತ್ರದಲ್ಲಿ ಒಟ್ಟು ೧೯ ಬೀಜ ವಿತರಣೆ ಕೇಂದ್ರ ಮಾಡಲಾಗಿದೆ. ಚಿಟಗುಪ್ಪ ವ್ಯಾಪ್ತಿಯಲ್ಲಿ ೫ ಬೀಜ ವಿತರಣೆ ಕೇಂದ್ರ ಮಾಡಲಾಗಿದೆ.
ಈ ಸಲ ಮಳೆ ಬೇಗ ಶುರುವಾಗಿದೆ. ಕಳೆದ ಒಂದು ವಾರದಿಂದ ಕ್ಷೇತ್ರದ ಬಹುತೇಕ ಕಡೆ ಮಳೆಯಾಗುತ್ತಿದೆ. ಒಂದು ವಾರದಲ್ಲಿ ಕ್ಷೇತ್ರದಲ್ಲಿ ಸರಾಸರಿ ೬ ಮಿಮೀ ಮಳೆ ಆಗಬೇಕಿತ್ತು. ಆದರೆ ವಾಸ್ತವವಾಗಿ ಸರಾಸರಿ ೩೫ ಮಿಮೀ ಮಳೆಯಾಗಿದೆ. ಕೆಲ ಹೋಬಳಿಗಳಲ್ಲಿ ಸರಾಸರಿ ೫೦ ಮಿಮೀ ಮಳೆಯಾಗಿದೆ. ಅನೇಕ ಕಡೆ ಮಳೆಯಾದ ಕಾರಣ ಹೊಲಗಳಲ್ಲಿ ನೀರು ನಿಂತಿದೆ. ತೇವಾಂಶ ಹೆಚ್ಚಿದೆ. ಅನೇಕ ರೈತರು ಹೊಲ ಹದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರೈತರು ಯಾವುದೇ ಕಾರಣಕ್ಕೂ ಹೆದರಬಾರದು. ಇನ್ನೂ ಸಾಕಷ್ಟು ಸಮಯವಿದೆ. ಜೂನ್ ಎರಡು, ಮೂರನೇ ವಾರದವರೆಗೆ ಬಿತ್ತನೆ ಮಾಡಬಹುದು. ಎಲ್ಲರೂ ತಯಾರಿ ಮಾಡಿಕೊಳ್ಳಿ. ಎಲ್ಲರಿಗೂ ಅಗತ್ಯ ಬೀಜ, ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ, ಗೊಬ್ಬರ ಪಡೆಯಬೇಕು.
ಅಲ್ಲಲ್ಲಿ ಯಾರಾದರೂ ಬಂದು ಬೀಜ, ಗೊಬ್ಬರ ಕಡಿಮೆ ದರದಲ್ಲಿ ಕೊಟ್ಟರೆ ಪಡೆದು ಮೋಸ ಹೋಗಬಾರದು. ಎಲ್ಲರೂ ರೈತ ಸಂಪರ್ಕದಲ್ಲಿ ಬೀಜ ಖರೀದಿಸಿ ಎಂದು ಮನವಿ ಮಾಡಿದರು.
ನಾವೆಲ್ಲರೂ ಕೃಷಿಯಲ್ಲಿ ಆಸಕ್ತಿ ವಹಿಸಬೇಕಾಗುತ್ತದೆ. ನಮ್ಮ ಮಕ್ಕಳು ಇಂದು ಓದುತ್ತಾರೆ. ಸಿಕ್ಕರೆ ನೌಕರಿ ಮಾಡುತ್ತಾರೆ. ನೌಕರಿ ಸಿಗದಿದ್ದರೆ ಏನಾದರೂ ಉದ್ಯೋಗ ಮಾಡಲು ಮುಂದಾಗುತ್ತಾರೆ. ಆದರೆ ಸ್ವಂತ ಜಮೀನು ಇದ್ದರೂ ಸಹ ಕೃಷಿ ಮಾಡಲು ಮುಂದಾಗುವುದಿಲ್ಲ ಇದು ನೋವಿನ ಸಂಗತಿ.
ಕೃಷಿಯಲ್ಲಿರುವ ಖುಷಿ, ಸಮಾಧಾನ, ಆರೋಗ್ಯ ಮತ್ತು ಆದಾಯ ಯಾವುದರಲ್ಲೂ ಇಲ್ಲ. ಆದರೆ ಇದಕ್ಕೆ ಶ್ರಮ ಅವಶ್ಯಕತೆಯಿದೆ ಭೂಮಿ ಬಂಗಾರ ಕೊಡುತ್ತದೆ ಎಂಬ ಮಾತು ನಿಜವಿದೆ.
ರೈತರು ಹಾಗೂ ಸೈನಿಕರು ದೇಶದ ಎರಡು ಕಣ್ಣು. ಜೈ ಜವಾನ್, ಜೈ ಕಿಸಾನ್. ಇವರಿಬ್ಬರೂ ಚೆನ್ನಾಗಿದ್ದಾಗಲೇ ದೇಶ ಚೆನ್ನಾಗಿ ಇರಲು ಸಾಧ್ಯ. ಭಾರತದಲ್ಲಿ ಇಂದು ೧೪೫ ಕೋಟಿ ಜನರಿದ್ದಾರೆ. ಎಲ್ಲರಿಗೂ ಆಹಾರ ಭದ್ರತೆ ಬೇಕು. ಇದಕ್ಕೆ ಕೃಷಿ ಚೆನ್ನಾಗಿರಬೇಕು. ಕೃಷಿ ಏರುಪೇರಾದರೆ ದೇಶದ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಅಷ್ಟೊಂದು ಪ್ರಾಧಾನ್ಯತೆ ಕೃಷಿಗೆ ಇದೆ. ಅದಕ್ಕಾಗಿಯೇ ಕೃಷಿ ಭಾರತದ ಬೆನ್ನೆಲುಬು ಎನ್ನುತ್ತಾರೆ.
ಆಧುನಿಕ ತಂತ್ರಜ್ಞಾನದ ಬಳಕೆ, ಮಿಶ್ರ ಬೇಸಾಯ, ತೋಟಗಾರಿಕೆ ಸೇರಿ ವಿವಿಧ ಬೆಳೆಗಳ ಮೂಲಕ ಒಂದೆರಡು ಎಕರೆ ಭೂಮಿಯಲ್ಲೂ ಲಕ್ಷಾಂತರ ಆದಾಯ ಗಳಿಸಬಹುದು. ಈ ಬಗ್ಗೆ ಯುವಕರು ಚಿತ್ತ ಹರಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ಎಂಎ ಖಾದ್ರಿ, ಗ್ರಾಪಂ ಅಧ್ಯಕ್ಷೆ ಧರ್ಮಾಬಾಯಿ ಮಿಟ್ಟು ಸಿಂಗ್, ಕೃಷಿ ವಿಜ್ಞಾನಿ ಡಾ. ಆರ್, ಎಲ್ ಜಾದವ್, ಕೃಷಿ ಎಡಿಎ ಅನ್ಸಾರಿ ಎಂಎಕೆ, ಮುಖಂಡರಾದ ರೇವಣ್ಣಪ್ಪ ಮೈಲಾರೆ, ಅಮೃತರಾವ ಪಾಟೀಲ್,ಗುರುನಾಥ ರಾಜಗೀರಾ, ಸದಾನಂದ ಜೋಶಿ, ಸೋಮನಾಥ ಪೊಶೆಟ್ಟಿ, ಘಾಳೆಪ್ಪ Àಟ್ಟನಳ್ಳಿ, ಶಶಿಕಾಂತ ಕಲ್ಲವೆಟ್ಟಿ, ಸಂತೋಷ ಬಿರಗಿ, ಸಂಗಮೇಶ ಸ್ವಾಮಿ, ಪ್ರಭುರಾವ ಹಲಬರ್ಗೆ,ಗ್ರಾಪಂ ಪಿಡಿಒ ಗೋದಾವರಿ, ಸದಸ್ಯರಾದ ವೈಜಿನಾಥ ಮೇತ್ರೆ, ಸಮಿ ಪಟೇಲ್, ಕಾಶಿನಾಥ, ಲತೀಫ್,ಕೃಷಿ ಇಲಾಖೆ ಎಓ ಸಂಗಮೇಶ, ಸತೀಶ ಶೆಟಕಾರ, ವೀರಶೆಟ್ಟಿ, ನಾಗನಾಥ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.