
ವಾಷಿಂಗ್ಟನ್, ಮೇ.೨೮- ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಮೆಗಾ ರಾಕೆಟ್ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದ್ದು, ಇದರಿಂದ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್‌ಗೆ ಮತ್ತೆ ಹಿನ್ನೆಡೆಯಾಗಿದೆ.
ಆರಂಭದಲ್ಲಿ ಸ್ಟಾರ್‌ಶಿಪ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾದರೂ, ಸುಮಾರು ಅರ್ಧ ಗಂಟೆಯ ನಂತರ ಅದು ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.
ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಿಂದ ಸ್ಟಾರ್‌ಶಿಪ್ ಮೆಗಾ ರಾಕೆಟ್ ಅನ್ನು ಉಡಾಯಿಸಲಾಗಿತ್ತು. ಪ್ರಸ್ತುತ ಕಾರ್ಯಚರಣೆಯು ಸ್ಟಾರ್‌ಶಿಪ್ ಮೂರನೇಯ ಪೂರ್ಣ ಪ್ರಮಾಣದ ಪರೀಕ್ಷಾರ್ಥ ಹಾರಾಟವಾಗಿದೆ. ಮೊದಲ ಪರೀಕ್ಷೆಯಲ್ಲಿ, ಉಡಾವಣೆಯ ಕೆಲವೇ ನಿಮಿಷಗಳಲ್ಲಿ ರಾಕೆಟ್ ಸ್ಫೋಟಗೊಂಡಿತ್ತು. ಅದೇ ರೀತಿ ಎರಡನೇ ಪರೀಕ್ಷಾರ್ಥ ಉಡಾವಣೆಯಲ್ಲಿ
ಬೂಸ್ಟರ್ ಮತ್ತು ನೌಕೆಯ ಬೇರ್ಪಡುವಿಕೆ ಯಶಸ್ವಿಯಾದರೂ ಎರಡೂ ಭಾಗಗಳು ನಂತರ ಸ್ಫೋಟಗೊಂಡಿದ್ದವು. ಈ ಬಾರಿಯ ಪರೀಕ್ಷೆಯಲ್ಲಿ ಸುಧಾರಣೆಗಳನ್ನು ಮಾಡಲಾಗಿತ್ತು. ಸ್ಟಾರ್‌ಶಿಪ್ ನೌಕೆಯು ಯಶಸ್ವಿಯಾಗಿ ಉಡಾವಣೆಯಾಗಿದೆ. ಆದರೆ, ಆ ಬಳಿಕ ವೈಫಲ್ಯ ಕಂಡಿದೆ.
ಸ್ಟಾರ್‌ಶಿಪ್ ನೌಕೆ ಭೂಪ್ರವೇಶದ ಸಂದರ್ಭದಲ್ಲಿ ನಾಶ ಹೊಂದಿದ್ದರೂ, ಸ್ಪೇಸ್‌ಎಕ್ಸ್ ಈ ಪರೀಕ್ಷೆಯನ್ನು “ಅತ್ಯಂತ ಯಶಸ್ವಿ ದಿನ” ಎಂದು ಬಣ್ಣಿಸಿದೆ. ಸಂಸ್ಥೆಯ ಪ್ರಕಾರ, ಈ ಪರೀಕ್ಷೆಯಿಂದ ಅಗಾಧ ಪ್ರಮಾಣದ ಡೇಟಾವನ್ನು ಸಂಗ್ರಹಿಸಲಾಗಿದೆ.
ಈ ಪರೀಕ್ಷೆಯು ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಗುರಿಗಳನ್ನು ತಲುಪಿದೆ. ಸಂಗ್ರಹವಾದ ಡೇಟಾವು ಸ್ಟಾರ್‌ಶಿಪ್‌ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಮತ್ತು ಭವಿಷ್ಯದ ಪರೀಕ್ಷೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸ್ಪೇಸ್‌ಎಕ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಎಲಾನ್ ಮಸ್ಕ್ ಕೂಡ ತಮ್ಮ ತಂಡವನ್ನು ಅಭಿನಂದಿಸಿದ್ದು, ಸ್ಟಾರ್‌ಶಿಪ್ ಮಾನವ ಕುಲವನ್ನು ಬಹುಗ್ರಹ ಜೀವಿಗಳನ್ನಾಗಿ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.