
ಬೆಂಗಳೂರು, ಜೂ. ೬- ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿಯ ವಿಜಯೋತ್ಸವ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ತಾವು ರಾಜಕೀಯ ಮಾಡಲು ಬಯಸಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ೪೩ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅರಸು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತಿವೆ. ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೈತಿಕ ಹೊಣೆ ಹೊರಬೇಕಿತ್ತು ಎಂಬ ವಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಜವಾಬ್ದಾರಿ ಹೊತ್ತಿದ್ದರೋ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಿತ್ತೋ ಅವರು ಮೇಲ್ನೋಟಕ್ಕೆ ಜವಾಬ್ದಾರಿ ನಿರ್ವಹಿಸದಿದ್ದಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳ ಅಮಾನತನ್ನು ಸಮರ್ಥಿಸಿಕೊಂಡರು.
ಈ ಘಟನೆ ಕುರಿತ ಬಗ್ಗೆ ಹೆಚ್ಚಿನ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಲು ಬಯಸಲಿಲ್ಲ.
ದಿ. ಅರಸು ಗುಣಗಾನ
ಇದಕ್ಕೂ ಮೊದಲು ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಕೆಲಸ, ಅವರ ರಾಜಕೀಯ ನಿಲುವುಗಳನ್ನು ಶ್ಲಾಘಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಅರಸು ಅವರು ರಾಜ್ಯ ಕಂಡ ಮುತ್ಸದಿ ರಾಜಕಾರಣಿಗಳಲ್ಲಿ ಒಬ್ಬರು ಎಂದರು.
ದಿ. ದೇವರಾಜ ಅರಸು ಅವರಿಗೆ ಬಡವರು, ತುಳಿತಕ್ಕೊಳಗಾದವರು, ಅನ್ಯಾಯಕ್ಕೊಳಗಾದವರ ಬಗ್ಗೆ ಅಪಾರ ಕಾಳಜಿ ಇತ್ತು ಎಂದರು.
ದಿ. ದೇವರಾಜ ಅರಸು ಅವರು ಬಡತನ ನಿರ್ಮಲನೆಗೆ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಜಾರಿ ಮಾಡಿದ್ದರು. ಅವರ ಕಾಲದಲ್ಲಿ ಯಾವ ಜನಾಂಗದವರಿಗೆ ರಾಜಕೀಯ ಅವಕಾಶ ಇರಲಿಲ್ಲವೋ ಅಂತಹ ಜನಾಂಗವನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗದವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದರು. ಅರಸು ಅವರ ಕೆಲಸಗಳು ನಮಗೆಲ್ಲಾ ಸದಾ ಸ್ಪೂರ್ತಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಸಾಮಾಜಿಕ ನ್ಯಾಯದಲ್ಲಿ ಬಲವಾದ ನಂಬಿಕೆ ಹೊಂದಿದ್ದ ಅರಸು ಅವರು, ನಿರ್ಗತಿಕರು, ಅವಕಾಶ ವಂಚಿತರು, ಭೂರಹಿತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದರು. ಉಳುವವನೆ ಭೂ ಒಡೆಯ ಎಂಬ ಕಾನೂನ್ನು ಜಾರಿ ಮಾಡಿ ಭೂರಹಿತರಿಗೆ ಭೂ ಒಡೆಯನ್ನಾಗಿ ಮಾಡಿದರು ಎಂದು ಮುಖ್ಯಮಂತ್ರಿ ಸಿದಧರಾಮಯ್ಯ ಹೇಳಿದರು.
ಜೀತ ಪದ್ಧತಿಯನ್ನು ರದ್ದು ಮಾಡಿದ್ದು ಅರಸು ಅವರು. ಮಾಡಿರುವ ಕೆಲಸಗಳ ದೊಡ್ಡ ಪಟ್ಟಿಯೇ ಇದೆ ನಾವು ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಕಲ್ಯಾಣ ಹಾಗೂ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಉಪಸ್ಥಿತರಿದ್ದರು.