ಬದುಕಿನಲ್ಲಿ ಸಂಸ್ಕಾರ-ಆದರ್ಶ ಗುಣ ಅಳವಡಿಸಿಕೊಳ್ಳಲು ಶ್ರೀಗಳ ಸಲಹೆ

ಕೊರಟಗೆರೆ, ಡಿ. ೮- ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವುದೊಂದೇ ಮುಖ್ಯವಲ್ಲ. ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.


ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ವಾಸವಿ ಯುವಜನ ಸಂಘದ ವತಿಯಿಂದ ಏರ್ಪಡಿಸಿದ್ದ ೨೦೨೪-೨೫ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.


ಪ್ರತಿಯೊಂದು ಸಮುದಾಯ ಗಳಲ್ಲಿಯೂ ಬಡತನವೆಂಬುದು ಎದ್ದು ಕಾಣುತ್ತಿದೆ, ಬಡತನವನ್ನು ನಿರ್ಮೂಲನೆ ಮಾಡಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲು ಸಂಘ-ಸಂಸ್ಥೆಗಳು ಹೆಚ್ಚಾಗಿ ಮುಂದೆ ಬರಬೇಕು ಎಂದು ಹೇಳಿದರು.


ವಾಸವಿ ಯುವಜನ ಸಂಘವು ಸಮಾಜಮುಖಿ ಕಾರ್ಯಗಳಲ್ಲೂ ಸಹ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮಾನವೀಯ ಮೌಲ್ಯಗಳು ಇಲ್ಲದೇ ಹೋದರೆ ಎಷ್ಟೇ ದೊಡ್ಡ ಗುರಿ ಇದ್ದರು ತಲುಪುವುದು ಅಸಾಧ್ಯ. ವಾಸವಿ ಸಂಘವು ಇನ್ನಷ್ಟು ಬಲಿಷ್ಟಗೊಳ್ಳಬೇಕು ಎಂದರು.


ತುಮಕೂರು ಪ್ರೇರಕ ತರಬೇತುದಾರ ಡಾ.ಚೈತನ್ಯ ವರ್ಧನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪೋಷಕರು ತಮ್ಮ ಆಸಕ್ತಿಗಳನ್ನು ಮಕ್ಕಳ ಮೇಲೆ ಹೇರಬೇಡಿ. ಮಕ್ಕಳ ಅಭಿರುಚಿ, ಆಸಕ್ತಿ, ಪರಿಣತಿ ಗುರುತಿಸಿ ಆ ಕ್ಷೇತ್ರದಲ್ಲಿ ಅವರು ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಬಾಲಾಜಿ ದರ್ಶನ್ ಮಾತನಾಡಿ, ಯಾವುದೇ ಕೆಲಸಕ್ಕೆ ಮುದಾದಾಗ ಸೋಲು ಎದುರಾಗುವುದು ಸಹಜ. ಸೋಲಿಗೆ ಎದೆಗುಂದದೆ ಸಾಧನೆಯತ್ತ ಮುನ್ನುಗ್ಗಬೇಕು. ಜೀವನದಲ್ಲಿ ಪ್ರಾಮಾಣಿಕತೆ, ಸಮಯಪಾಲನೆ, ವಿಶ್ವಾಸಾರ್ಹತೆ, ಸತತ ಪರಿಶ್ರಮ, ಶ್ರದ್ಧೆ ಮುಖ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ಮಕ್ಕಳಿಗೆ ವಾಸವಿ ಯುವಜನ ಸಂಘದ ಮುಖ್ಯಸ್ಥರು ಗೌರವಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸುಷ್ಮಾರಾಣಿ, ಎಂ.ಜಿ ಸುಧೀರ್, ವಿದ್ಯಾ ಪ್ರಸಾದ್, ಎಂ.ಜಿ ಬದರಿಪ್ರಸಾದ್, ಹೆಚ್.ಜಿ ಕೃಷ್ಣಯ್ಯ ಶ್ರೇಷ್ಟಿ, ಕೆ.ಎಲ್ ಲಕ್ಷ್ಮಿ ಶ್ರೀನಿವಾಸ್, ನಾಗಶಯನ ಕೆ.ಎಸ್. ಮತ್ತಿತರರು ಭಾಗವಹಿಸಿದ್ದರು.