Home ಮುಖಪುಟ ಸುದ್ದಿ ಶೃಂಗೇರಿ ಮರು ಮತ ಎಣಿಕೆ: ಬಿಜೆಪಿ ಕ್ರಿಮಿನಲ್ ಪಿತೂರಿ

ಶೃಂಗೇರಿ ಮರು ಮತ ಎಣಿಕೆ: ಬಿಜೆಪಿ ಕ್ರಿಮಿನಲ್ ಪಿತೂರಿ

ಬೆಂಗಳೂರು, ಮೇ ೫- ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯವರು ಕ್ರಿಮಿನಲ್ ಪಿತೂರಿ ನಡೆಸಿ ಮತ ಕದ್ದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.


ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ವೋಟ್ ಚೋರಿ ನಡೆದಿದೆ ಎಂದು ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದರು.


ಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರು ಎಣಿಕೆಯಾಗಿದೆ. ಕಾಂಗ್ರೆಸ್‌ನ ರಾಜೇಗೌಡ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ೨೦೧ ಮತಗಳಿಂದ ಗೆಲುವು ಸಾಧಿಸಿದ್ದರು. ರಾಜೇಗೌಡ ಅವರಿಗೆ ಇವಿಎಂನಲ್ಲಿ ೫೯,೧೭೧ ಮತ, ೫೬೯ ಅಂಚೆ ಮತಗಳು ಬಂದಿತ್ತು. ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಇವಿಎಂನಲ್ಲಿ ೫೮,೯೭೦ ಮತ ಹಾಗೂ ಅಂಚೆ ಮತಗಳು ೬೯೨ ಬಂದಿತ್ತು. ಒಟ್ಟಾರೆ ೨೦೧ ಮತದಿಂದ ರಾಜೇಗೌಡ ಗೆದ್ದಿದ್ದರು. ಬಿಜೆಪಿ ಅಭ್ಯರ್ಥಿ ಚುನಾವಣಾ ಅಕ್ರಮವಾಗಿದೆ ಎಂದು ಪ್ರಕರಣ ದಾಖಲಿಸಿದ್ದರು.

ಹೈಕೋರ್ಟ್ ಮಾರ್ಚ್ ೬ ರಂದು ಅಂಚೆ ಮತ ಎಣಿಕೆಗೆ ಆದೇಶ ಮಾಡಿತ್ತು. ಅದರಂತೆ ಮೇ ೨ ರಂದು ಮತ ಮರು ಎಣಿಕೆ ನಡೆದಿತ್ತು. ಮರು ಎಣಿಕೆಯಲ್ಲಿ ೩೧೪ ಮತಗಳು ಮಾತ್ರ ಸಿಂಧು ಆಗುತ್ತದೆ. ೨೫೫ ಮತಗಳು ಅಸಿಂಧು ಆಗುತ್ತವೆ. ಏಕೆ ಆ ಮತಗಳು ಅಸಿಂಧು ಆದವು. ಜೀವರಾಜ್‌ಗೆ ೨೦೨೩ರಲ್ಲಿ ೬೯೨ ಅಂಚೆ ಮತ ಬಿದ್ದಿತ್ತು. ಮರು ಎಣಿಕೆಯಲ್ಲಿ ೬೯೦ ಮತ ಲಭಿಸಿವೆ. ೨ ಮತಗಳು ಮಾತ್ರ ಕಡಿಮೆಯಾಗಿವೆ. ಇದನ್ನು ನೋಡಿದಾಗ ಬಿಜೆಪಿಯವರು ಕ್ರಿಮಿನಲ್ ಪಿತೂರಿ ನಡೆಸಿ ವೋಟ್ ಚೋರಿ ನಡೆಸಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.


ರಾಜೇಗೌಡರಿಗೆ ಬಿದ್ದಿದ್ದ ೨೫೫ ಅಂಚೆ ಮತ ಅಸಿಂಧು ಆಗಿತ್ತು. ಇದನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಮರು ಎಣಿಕೆಯಲ್ಲಿ ಜೀವರಾಜ್‌ಗೆ ೫೨ ಮತ ಜಾಸ್ತಿ ಬಂದಿದೆ. ನಾನು ಅಧಿಕಾರಿಗಳ ಜತೆ ಹಾಗೂ ಚುನಾವಣಾ ತಜ್ಞರ ಜತೆ ಮಾತನಾಡಿದೆ. ಎಣಿಕೆಯಾದ ಮೇಲೆ ಎಲ್ಲಾ ದಾಖಲಾತಿಗಳನ್ನು ಟ್ರಂಕ್‌ನಲ್ಲಿಟ್ಟು ಕಳುಹಿಸುತ್ತಾರೆ. ಆಗ ಅಧಿಕಾರದಲ್ಲಿದ್ದ ಬಿಜೆಪಿ ಪ್ರಭಾವ ಬಳಸಿ ಸಿಬ್ಬಂದಿ ಮೂಲಕ ಟ್ರಂಕ್‌ನಲ್ಲಿದ್ದ ಮತಪತ್ರಗಳನ್ನು ತಿದ್ದಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಅಪರಾಧ ಎಂದು ಮುಖ್ಯಮಂತ್ರಿಗಳು ಗುಡುಗಿದರು.


ಮರು ಎಣಿಕೆ ವೇಳೆ ಕೇಂದ್ರದ ವೀಕ್ಷಕರು ಬಂದಿದ್ದರು. ನಮಗಿರುವ ಮಾಹಿತಿ ಪ್ರಕಾರ ಕೇಂದ್ರ ವೀಕ್ಷಕರು ಗಂಭೀರ ಸ್ವರೂಪದ ಸಂಚು ನಡೆದಿದೆ ಎಂದು ಪತ್ರ ಬರೆದಿರುವ ಮಾಹಿತಿ ಇದೆ. ಈಗ ದೂರು ನೀಡಲಾಗಿದೆ. ಏನಾಗುತ್ತದೋ ನೋಡೋಣ ಎಂದು ಅವರು ಹೇಳಿದರು.


ಮುಂದೆಯೂ ಕಾಂಗ್ರೆಸ್
ಉಪಚುನಾವಣೆಯಲ್ಲಿ ಕಾಂಗ್ರೆಸ್ ದಾವಣಗೆರೆ-ಬಾಗಲಕೋಟೆ ಎರಡರಲ್ಲೂ ಗೆದ್ದಿದೆ. ೨೦೨೮ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಜನರು ನಮ್ಮ ಮೇಲೆ ವಿಶ್ವಾಸ, ಅಭಿಮಾನ ಇಟ್ಟುಕೊಂಡಿರುವುದು ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದು ಅವರು ಹೇಳಿದರು.


ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿದಿವೆ. ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ ಎಂಬುನ್ನು ಜನ ಅರಿತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ ಎಲ್ಲಾ ಮತದಾರರಿಗೂ ಅಭಿನಂದನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.