Home ಜಿಲ್ಲೆ ತ್ರಿವಿಧ ದಾಸೋಹ ಪರಂಪರೆಯಿAದ ಸಮಾಜಜಾಗೃತಿ ವಿಸ್ತರಣೆ: ಶಾಸಕ ಶರಣಗೌಡ ಕಂದಕೂರ

ತ್ರಿವಿಧ ದಾಸೋಹ ಪರಂಪರೆಯಿAದ ಸಮಾಜಜಾಗೃತಿ ವಿಸ್ತರಣೆ: ಶಾಸಕ ಶರಣಗೌಡ ಕಂದಕೂರ

ಯಾದಗಿರಿ:ಫೆ.೧೧:ತಾಲೂಕಿನ ಹೆಡಗಿಮದ್ರಾ ಗ್ರಾಮವು ಶ್ರೀ ಶಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಧರ್ಮ-ಸಾಂಸ್ಕೃತಿಕೋತ್ಸವದಿAದ ಭಕ್ತಿಭಾವ, ಸಂಸ್ಕೃತಿ ಹಾಗೂ ಪರಂಪರೆಯ ಮೇಳೈಸಿದ ಪಾವನ ವಾತಾವರಣಕ್ಕೆ ಸಾಕ್ಷಿಯಾಯಿತು. ಭವ್ಯ ರಥೋತ್ಸವದ ನಂತರ ಆಯೋಜಿಸಲಾದ ಧರ್ಮ-ಸಾಂಸ್ಕೃತಿಕ ಸಭೆಯಲ್ಲಿ ಸಾವಿರಾರು ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಉತ್ಸವಕ್ಕೆ ಅದ್ದೂರಿ ಕಂಗೊಳ ತಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ, ನಾಡಿನ ಮಠಗಳು ಕೇವಲ ಧಾರ್ಮಿಕ ಆಚರಣೆಗಳ ಕೇಂದ್ರಗಳಾಗಿಯೇ ಉಳಿಯದೆ, ಅನ್ನದಾಸೋಹ, ವಿದ್ಯಾದಾಸೋಹ ಹಾಗೂ ಆಶ್ರಯದಾಸೋಹಗಳ ಮೂಲಕ ಮಾನವೀಯ ಮೌಲ್ಯಗಳನ್ನು ಬಲಪಡಿಸುತ್ತಿವೆ ಎಂದು ಅಭಿಪ್ರಾಯಪಟ್ಟರು. ಇಂತಹ ತ್ರಿವಿಧ ದಾಸೋಹ ಪರಂಪರೆ ಸಮಾಜದಲ್ಲಿ ಸಮಾನತೆ, ಸೇವಾಭಾವ ಮತ್ತು ಸಹಕಾರ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದರು.

ಮಠಾಧೀಶರು ಧಾರ್ಮಿಕ ಕ್ಷೇತ್ರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿಯೂ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಮಠಗಳಲ್ಲಿ ಹೆಡಗಿಮದ್ರಾ ಮಠವು ತನ್ನ ಸೇವಾಕಾರ್ಯ, ಶೈಕ್ಷಣಿಕ ಪ್ರೋತ್ಸಾಹ ಹಾಗೂ ಧಾರ್ಮಿಕ ಜಾಗೃತಿಯಿಂದ ವಿಶಿಷ್ಟ ಗುರುತನ್ನು ಪಡೆದುಕೊಂಡಿದೆ ಎಂದು ಹೇಳಿದರು.

ದೇವಾಪುರದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿ, ಶಾಂತ ಶಿವಯೋಗಿಗಳು ಅದ್ಭುತ ಪವಾಡಗಳನ್ನು ಪ್ರದರ್ಶಿಸದೆ, ತಮ್ಮ ಸರಳ ಜೀವನಾಚರಣೆಯ ಮೂಲಕವೇ ಮಹತ್ವ ಸಾರಿದ ಮಹಾನ್ ಸಂತರು. ಶೂನ್ಯ ಸ್ಥಿತಿಯಲ್ಲಿದ್ದ ಮಠವನ್ನು ಸಂಘಟಿತ ಶ್ರಮ, ತ್ಯಾಗ ಮತ್ತು ಭಕ್ತಿಯ ಬಲದಿಂದ ಅಭಿವೃದ್ಧಿಯ ಶಿಖರದತ್ತ ಕೊಂಡೊಯ್ದ ಪೀಠಾಧಿಪತಿಗಳ ಸೇವೆ ಅನನ್ಯವಾಗಿದೆ ಎಂದು ಕೊಂಡಾಡಿದರು. ಮಠವು ಜಾತಿ, ಮತ, ಪಂಥ ಭೇದ ಮೀರಿ ಸಮಾನತೆಯ ಸಂಕೇತವಾಗಿ ಬೆಳೆಯುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಪೀಠಾಧಿಪತಿ ಶ್ರೀ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ಆಶೀರ್ವಚನ ನೀಡುತ್ತಾ, ಕಳೆದ ವರ್ಷ ಅತಿವೃಷ್ಠಿಯಿಂದ ರೈತ ಸಮುದಾಯ ಸಂಕಷ್ಟದಲ್ಲಿದ್ದ ಹಿನ್ನೆಲೆಯಲ್ಲಿ ಜಾತ್ರೆಯನ್ನು ವಿಜೃಂಭಣೆಯಿAದ ಆಚರಿಸಬಾರದೆಂದು ನಿರ್ಧರಿಸಲಾಗಿತ್ತು. ಆದಾಗ್ಯೂ ಸರಳ ಆಚರಣೆಯಲ್ಲಿಯೂ ಭಕ್ತರ ಅಪಾರ ಸ್ಪಂದನೆ ದೊರೆತಿದ್ದು, ಈ ಬಾರಿ ಕಳೆದ ವರ್ಷಕ್ಕಿಂತಲೂ ದ್ವಿಗುಣ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ಶಾಂತ ಶಿವಯೋಗಿಗಳ ಕೃಪೆಯ ಫಲವೆಂದು ಹೇಳಿದರು. ಮಠದ ನಿಜವಾದ ಶಕ್ತಿ ಭಕ್ತರ ಭಕ್ತಿ, ನಿಷ್ಠೆ ಹಾಗೂ ಏಕತೆಯಲ್ಲಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, ದಶಕಗಳಿಂದ ನಡೆಯುತ್ತಿರುವ ಈ ಜಾತ್ರೆ, ಪೀಠಾಧಿಪತಿಗಳ ನೇತೃತ್ವದಲ್ಲಿ ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಿಸಿಕೊಂಡು ಬರುತ್ತಿದೆ. ಮಠದ ಸರ್ವಾಂಗೀಣ ಅಭಿವೃದ್ಧಿ ನಿಜಕ್ಕೂ ಹೆಮ್ಮೆಪಡುವಂತಹದ್ದು ಎಂದರು.

ರಥೋತ್ಸವಕ್ಕೆ ಮುಗುನಾಗವಿ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಶಾಸಕ ಚನ್ನರಡಿಗೌಡ ಪಾಟೀಲ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಭಕ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಉತ್ಸವಕ್ಕೆ ಸಾಕ್ಷಿಯಾದರು. ಗಿರೀಶಗೌಡ ಪಾಟೀಲ್ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮವನ್ನು ನಿರೂಪಿಸಿದರು.

“ಶ್ರೀಮಠಕ್ಕೆ ನಾನು ಯಾವತ್ತೂ ರಾಜಕಾರಣಿಯಾಗಿ ಬಂದಿಲ್ಲ; ಸದ್ಭಕ್ತನಾಗಿ, ಶರಣಾಗಿ ಬಂದಿದ್ದೇನೆ. ಈ ಪವಿತ್ರ ಪೀಠವು ಧಾರ್ಮಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ, ಅನ್ನದಾಸೋಹ, ವಿದ್ಯಾದಾಸೋಹ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಸಮಾಜೋದ್ಧಾರದಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ವಿಷಯ. ಮಠದ ಅಭ್ಯುದಯ, ಧಾರ್ಮಿಕ ಪರಂಪರೆಗಳ ವಿಸ್ತರಣೆ, ಶಿಕ್ಷಣ ಹಾಗೂ ಸೇವಾ ಚಟುವಟಿಕೆಗಳ ಅಭಿವೃದ್ಧಿಗೆ ನಮ್ಮ ಸಹಕಾರ ಸದಾಕಾಲವೂ, ಸದಾ ಸನ್ನದ್ಧವಾಗಿಯೇ ಇರುತ್ತದೆ.”
ಶಾಸಕ ಶರಣಗೌಡ ಕಂದಕೂರ